ಜಿಲ್ಲೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಮಸ್ಯೆ ಇನ್ನೂ ನಿವಾರಣೆ ಆಗದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೋಟೆಲ್ ಮಾಲೀಕರಿಗೆ ಸಂಕಟ ಹೆಚ್ಚಾಗತೊಡಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ನಿರಂತರ ನಡೆಯುತ್ತಿದ್ದು, ಯಾವಾಗ ಯುದ್ಧ ನಿಲ್ಲುವುದೋ ಎಂಬ ಚಿಂತೆ ಹೋಟೆಲ್ ಉದ್ಯಮಕ್ಕೆ ಕಾಡತೊಡಗಿದೆ.
ಕೆಲ ಹೋಟೆಲ್ಗಳಲ್ಲಿ ಬೆಳಗಿನ ತಿಂಡಿಯಾಗಿ ಒಮ್ಮೆ ಮಾಡಿಟ್ಟುಕೊಳ್ಳಬಹುದಾದ ಇಡ್ಲಿ&ವಡಾ ಸಾಂಬಾರ್, ಬನ್ಸ್ ಹಾಗೂ ಲಾವ್ ಮಾತ್ರ ಲಭಿಸುತ್ತಿದೆ. ಮಧ್ಯಾಹ್ನ ಸೀಮಿತ ಪ್ರಮಾಣದಲ್ಲಿ ಮಾತ್ರ ಅನ್ನ, ರಸಂ ಅಥವಾ ಸಾಂಬಾರ್ ಮಾಡಲಾಗುತ್ತಿದೆ. ಅನ್ನ ಖಾಲಿಯಾದ ಬಳಿಕ ಮತ್ತೆ ಅನ್ನ ಮಾಡುತ್ತಿಲ್ಲ. ಇದರಿಂದ ಹೋಟೆಲ್ಗೆ ಬರುವ ಅನೇಕ ಗ್ರಾಹಕರಿಗೆ ಕೆಲವೆಡೆ ಮಧ್ಯಾಹ್ನ ಊಟವೂ ಸಿಗದ ಪರಿಸ್ಥಿತಿ ಆರಂಭವಾಗುತ್ತಿದೆ.
ಗ್ರಾಹಕರಿಗೆ ಅನಿವಾರ್ಯತೆ
ಹೋಟೆಲ್ಗೆ ಬರುವ ಗ್ರಾಹಕರಿಗೆ ಇದೀಗ ತಮಗೆ ಬೇಕಾದ ಊಟೋಪಹಾರವೂ ಲಭಿಸುತ್ತಿಲ್ಲ. ಬೆಳಗ್ಗೆ, ಮಧ್ಯಾಹ್ನ ಅಥವಾ ಸಾಯಂಕಾಲ ಹೋಟೆಲ್ಗೆ ಬಂದರೆ ವಿದ್ಯುತ್ ಒಲೆಯ ಮೂಲಕ ಮಾಡಿಟ್ಟಿರುವ ಟೀ-ಕಾಫಿ, ಅವಲಕ್ಕಿ ಅಥವಾ ಉಪ್ಪಿಟ್ಟು ಬಿಟ್ಟರೆ ಬೇರೇನೂ ಸಿಗುತ್ತಿಲ್ಲ. ಹಸಿವು ನೀಗಿಸಿಕೊಳ್ಳಲು ಅನಿವಾರ್ಯವಾಗಿ ಮಧ್ಯಾಹ್ನದ ಊಟದ ಸಮಯದಲ್ಲೂ ಕೆಲವರು ಉಪ್ಪಿಟ್ಟು-ಇಡ್ಲಿ ತಿನ್ನಬೇಕಾದ ಅನಿವಾರ್ಯತೆ ಉಂಟಾಗಿದೆ ಎನ್ನುತ್ತಾರೆ ಹೋಟೆಲ್ಗಳನ್ನೇ ನಂಬಿ ಜೀವನ ನಡೆಸುತ್ತಿರುವ ಗ್ರಾಹಕರು.
"
ಗ್ಯಾಸ್ ಸಿಲಿಂಡರ್ ಸ್ಥಗಿತ ಆಗಿದ್ದರಿಂದ ಹೋಟೆಲ್ಗಳಲ್ಲಿ ಈ ಮೊದಲಿನಂತೆ ವಿವಿಧ ಬಗೆಯ ತಿಂಡಿ, ಊಟೋಪಚಾರ ಲಭಿಸುತ್ತಿಲ್ಲ. ಬೆಳಗ್ಗೆ ಒಮ್ಮೆ ಮಾತ್ರ ಸಾಂಬಾರ್, ಚಟ್ನಿ, ಇಡ್ಲಿ-ವಡಾ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಅನ್ನ ಮಾಡುತ್ತಿದ್ದೇವೆ. ಹೋಟೆಲ್ಗಳ ದುಸ್ಥಿತಿ ಅರಿತು ಹೆಚ್ಚಿನ ಗ್ರಾಹಕರೂ ಬರುತ್ತಿಲ್ಲ. ಪರಿಸ್ಥಿತಿ ತುಂಬ ಕಷ್ಟ ಇದೆ. ಕರೋನಾ ಕಾಲದ ಸಂಕಟವನ್ನೂ ಇದು ಮೀರಿಸುತ್ತಿದೆ. ತುಂಬ ನಷ್ಟ ಆಗುತ್ತಿದೆ. ನಾವೂ ಸಹ ಹೋಟೆಲ್ ಬಂದ್ ಮಾಡುವ ಹಂತಕ್ಕೆ ಬಂದಿದ್ದೇವೆ.