ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ನಂಟು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ವಿವಾದ ತನಿಖೆಯಿಂದ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಮುನ್ನ ಯುಪಿಸಿಎಲ್ ಉದ್ಯೋಗಿಗಳಿಗೆ ಹಾಗೂ ಡೇವಿಡ್ ಡಿಸೋಜಾ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಬಾಂಬೆ ಮೂಲದ ಅಂಡರ್ವರ್ಲ್ಡ್ ಡಾನ್ ಹೇಮಂತ್ ಪೂಜಾರಿ ಮಾತನಾಡುತ್ತಿರುವುದಾಗಿ ಬೆದರಿಕೆ ಹಾಕಿದ್ದ. ಪೈಪ್ಲೈನ್ ಯೋಜನೆ ಗುತ್ತಿಗೆಯನ್ನು ತಮ್ಮ ಕಿಶೋರ್ ಪೂಜಾರಿಗೆ ನೀಡಬೇಕೆಂದು ಒತ್ತಡ ಹೇರಿದ್ದ ಎಂದು ಮಾಹಿತಿ ನೀಡಿದ್ದಾರೆ.
ಖಾಸಗಿ ಗುತ್ತಿಗೆದಾರ ಕಿಶೋರ್ ರಾಮ್ ಪೂಜಾರಿ ಈ ಹಿಂದೆ ಯುಪಿಸಿಎಲ್ನಲ್ಲಿ ಕಾಮಗಾರಿ ನಡೆಸಿದ್ದ. ಪೈಪ್ಲೈನ್ ಹಾಗೂ ಕಾಂಕ್ರೀಟ್ ರಸ್ತೆ ನಿಮಾರ್ಣದ ಭಾರಿ ಮೌಲ್ಯದ ಯೋಜನೆ ತನಗೇ ಸಿಗಬೇಕೆಂದು ಬಯಸಿದ್ದ. ಆದರೆ ಈ ಪ್ರಾಜೆಕ್ಟ್ ಸಿಗದಿದ್ದಾಗ, ಡೇವಿಡ್ ಡಿಸೋಜಾ ಹಾಗೂ ಸಂಸ್ಥೆಯ ಮೇಲೆ ವೈಮನಸ್ಸು ಬೆಳೆಸಿಕೊಂಡು ದಾಳಿಗೆ ಸಂಚು ರೂಪಿಸಿ, ಹೇಮಂತ್ ಪೂಜಾರಿ ಎಂಬ ವ್ಯಕ್ತಿಯ ನೆರವಿನೊಂದಿಗೆ ಸುಪಾರಿ ನೀಡಿದ್ದನು ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಉತ್ತರ ಪ್ರದೇಶ ಶೂಟರ್ ರಾಜು , ಮಹಾರಾಷ್ಟ್ರದ ಅನ್ಮೋಲ್ ರಸ್ತೋಗಿ ಮತ್ತು ಬಿಹಾರ ಜಿಯಾವುಲ್ ವಜುಲ್ ಶೇಖ್ ಅಲಿಯಾಸ್ ಎ.ಎಸ್. ದೀಪಕ್ ಎಂಬ ಮೂವರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಆಕ್ರಮಣ ಮಾಡಲು ಯತ್ನಿಸಿದ ಶೂಟರ್ ರಾಜು ಕಾಲಿಗೆ ಫೈರಿಂಗ್ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಿಹಾರ ಮೂಲದ ಅನುಜ್ ಪಾಟೀಲ್ ಶಾರ್ಪ್ಶೂಟರ್ಗಳನ್ನು ಕಿಶೋರ್ಗೆ ಪರಿಚಯಿಸಿದ್ದನು. ಈತ ಮಹಾರಾಷ್ಟ್ರ, ಗುಜರಾತ್, ಹರಿಯಾಣ ಹಾಗೂ ದೆಹಲಿ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಅಪರಾಧ ಸಿಂಡಿಕೇಟ್ ನಡೆಸುತ್ತಿದ್ದ ಎಂದು ತಿಳಿಸಿದರು.
ಕೃತ್ಯ ನಡೆದ ತಕ್ಷಣ ಆರೋಪಿಗಳ ಖಾತೆಗೆ ಶಂಕಾಸ್ಪದವಾಗಿ ಹಣ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರ್ಥಿಕ ವಹಿವಾಟನ್ನು ಬೆನ್ನಟ್ಟಿದಾಗ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ್ ದೇವಾಡಿಗ ಹಣದ ವ್ಯವಸ್ಥೆ ಮಾಡಿಕೊಟ್ಟಿರುವುದು ಗೊತ್ತಾಗಿದೆ ಎಂದು ಹೇಳಿದರು. ಅಡಿಶನಲ್ ಎಸ್ಪಿ ಸುಧಾಕರ್ ನಾಯಕ್ ಉಪಸ್ಥಿತರಿದ್ದರು.