ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. 
ಉಡುಪಿ

ಸೌಲಭ್ಯ ವಂಚಿತ ನರಿಕೊಂಬು ಶಾಲೆ

ಇಂದಿರಾ ಎನ್ ಕೆ
ಸಂದೀಪ್ ಸಾಲ್ಯಾನ್ ಬಂಟ್ವಾಳ
ಗುಣಮಟ್ಟದ ಶಿಕ್ಷಣ, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ನಿರಂತರ ಪ್ರಯತ್ನದ ಜತೆಗೆ ಪಾಲಕರ ಒಲವು ಇದ್ದಾಗ ಸರ್ಕಾರಿ ಶಾಲೆಗಳಲ್ಲೂ ದಾಖಲಾತಿ ಸಂಖ್ಯೆ ಹೆಚ್ಚಲು ಸಾಧ್ಯವಿದೆ. ಇದಕ್ಕೊಂದು ಉದಾಹರಣೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಬಾರಿ ನೂರರ ಸನಿಹಕ್ಕೆ ಹೊಸ ವಿದ್ಯಾರ್ಥಿಗಳು ದಾಖಲಾಗಿ ಸಂಭ್ರಮಿಸುವ ಹೊಸ್ತಿಲಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳ ಕೊರತೆ ಎದುರಾಗಿದೆ.
ನರಿಕೊಂಬು ಸರ್ಕಾರಿ ಶಾಲೆ 1955ರಲ್ಲಿ ಆರಂಭವಾಗಿದ್ದು, ಕೆಲವೇ ವರ್ಷಗಳಲ್ಲಿ ಅಮೃತ ಮಹೋತ್ಸವ ಆಚರಿಸುವ ಸಂಭ್ರಮದಲ್ಲಿದೆ. ಶಾಲೆಯಲ್ಲಿ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಭಾಷೆ ಕಲಿಕೆಗೆ ಅವಕಾಶ, ಗುಣಮಟ್ಟದ ಶಿಕ್ಷಣ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ, ವಿದ್ಯಾರ್ಥಿಗಳ ಸರ್ವಾಂಗೀಣ ಕಲಿಕೆಗೆ ಪೂರಕ ವಾತವರಣ ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಈ ವರ್ಷ ಎಲ್‌ಕೆಜಿ ಹಾಗೂ 1ನೇ ತರಗತಿ ಸೇರಿ 80 ಮಂದಿ ಹೊಸ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 423ಕ್ಕೆ ಏರಿಕೆಯಾಗಿದೆ.

ತರಗತಿ ಕೋಣೆ ಕೊರತೆ

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಹಜವಾಗಿ ಕೊಠಡಿ ಕೊರತೆ ಎದುರಾಗಿದೆ. ಪ್ರಸ್ತುತ ಶಾಲೆಯಲ್ಲಿ 10 ಕೊಠಡಿಗಳು ಮಾತ್ರ ಇದ್ದು ಹೆಚ್ಚುವರಿಯಾಗಿ 8 ಕೊಠಡಿಗಳ ಅವಶ್ಯಕತೆ ಇದೆ. ಕೆಲವು ಕೋಣೆಗಳ್ನು ಪಾರ್ಟಿಷನ್ ಮೂಲಕ ವಿಭಾಗಿಸಿ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯಶಿಕ್ಷಕರಿಗೆ ಪ್ರತ್ಯೇಕ ಕಚೇರಿ ಇಲ್ಲದ ಕಾರಣ ಎಲ್ಲ 19 ಮಂದಿ ಶಿಕ್ಷಕರು ಒಂದೇ ಕೋಣೆ ಉಪಯೋಗಿಸುತ್ತಿದ್ದಾರೆ.

ಸ್ಥಳವಕಾಶದ ಕೊರತೆ

ಶಾಲೆಗೆ ಕೇವಲ 26 ಸೆಂಟ್ಸ್ ಮಾತ್ರ ಜಾಗವಿದೆ. ಹೊಸ ತರಗತಿ ಕೋಣೆ ನಿರ್ಮಾಣಕ್ಕೂ ಜಾಗದ ಕೊರತೆ ಎದುರಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎನ್‌ಎಂಪಿಟಿಯ ಸಿಎಸ್‌ಆರ್ ನಿಧಿಯಡಿ ನಿರ್ಮಾಣಗೊಂಡ ಅಡುಗೆ ಕೋಣೆ ಹಾಗೂ ಭೋಜನಶಾಲೆ ಕಟ್ಟಡದ ಅಡಿಪಾಯ ಸದೃಢಗೊಳಿಸಿ ಅದರ ಮೇಲ್ಭಾಗದಲ್ಲಿ ತರಗತಿ ಕೋಣೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. 6 ಕೊಠಡಿ ನಿರ್ಮಿಸುವ ಅವಕಾಶವಿದ್ದು ಸರ್ಕಾರ ಇತ್ತ ಗಮನ ಹರಿಸಿ, ಕಾರ್ಯಪ್ರವೃತ್ತವಾದರೆ ಈಗ ಎದುರಾಗಿರುವ ಕೊಠಡಿ ಸಮಸ್ಯೆಗೆ ಪರಿಹಾರ ಸಿಗಲಿದೆ.

ಆಟದ ಮೈದಾನವೂ ಇಲ್ಲ

400ಕ್ಕಿಂತಲೂ ಅಧಿಕ ಮಕ್ಕಳಿರುವ ಶಾಲೆಯಲ್ಲಿ ಕೇವಲ 5 ಶೌಚಗೃಹವಿದೆ. ಪ್ರಸ್ತುತ 2 ಬಾಲಕರಿಗೆ, 3 ಬಾಲಕಿಯರಿಗೆಂದು ವಿಭಾಗಿಸಿ ಬಳಸಲಾಗುತ್ತಿದ್ದು, ಪ್ರತ್ಯೇಕ ಶೌಚಗೃಹದ ಅವಶ್ಯಕತೆಯಿದೆ. ಶಾಲೆಗೆ ಮೈದಾನವಿಲ್ಲದೆ ಕ್ರೀಡಾ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಆದರೂ ಇರುವ ವ್ಯವಸ್ಥೆ ಬಳಸಿಕೊಂಡು ಇಲ್ಲಿನ ವಿದ್ಯಾರ್ಥಿಗಳ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮುಖ್ಯಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಸೇರಿ ಒಟ್ಟು 8 ಮಂದಿ ಸರ್ಕಾರಿ ಶಿಕ್ಷಕರಿದ್ದಾರೆ. ಸರ್ಕಾರದ ವೇತನ ಪಾವತಿಯಾಗುವ ಓರ್ವ ಅತಿಥಿ ಶಿಕ್ಷಕರಿದ್ದು 10 ಮಂದಿ ಅತಿಥಿ ಶಿಕ್ಷಕರನ್ನು ಎಸ್‌ಡಿಎಂಸಿ ನೇಮಿಸಿದೆ.

ಪಾಲಕರು, ಸಂಘ-ಸಂಸ್ಥೆಗಳ ಸಹಕಾರ

ಶಾಲೆ ಹಳೇ ವಿದ್ಯಾರ್ಥಿ ಪ್ರಕಾಶ್ ಕಾರಂತ್ ನೇತೃತ್ವದಲ್ಲಿ ರೋಟರಿ ಕ್ಲಬ್ ಬಂಟ್ವಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ದಕ್ಷಿಣ ಇನ್ನರ್‌ವೀಲ್ ಸದಸ್ಯೆ ನಂದಿನಿ ರಘುಚಂದ್ರನ್ ಶಾಲೆ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳ ಪಾಲಕರು ಅತಿಥಿ ಶಿಕ್ಷಕರ ವೇತನ, ಬೆಂಚು, ಡೆಸ್ಕು ಮೊದಲಾದ ಮೂಲಸೌಲಭ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ.

ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಶಿಕ್ಷಣ ದೊರೆಯುವುದರಿಂದ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಸ್ತುತ ಕೊಠಡಿ ಸಮಸ್ಯೆ ಎದುರಾಗಿದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮೂಲ ಸೌಲಭ್ಯ ಒದಗಿಸಿದರೆ ನಮ್ಮ ಸರ್ಕಾರಿ ಶಾಲೆ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ.

— ರವಿ ಅಂಚನ್, ಅಧ್ಯಕ್ಷ, ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ