ಕಡಬ ತಾಲೂಕಿನ ಪೆರಾಬೆ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಬುಟ್ಟಿ ನೇಯುವ ಐತ್ತ ಮತ್ತು ಬಾಬು.
ಅನಾದಿ ಕಾಲದಿಂದಲೂ ಜೀವನದೊಂದಿಗೆ ಹಾಸುಹೊಕ್ಕಾಗಿ ಬಂದ ಅನೇಕ ಕುಲಕಸುಬುಗಳು ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿವೆ. ಈ ಮಧ್ಯೆ, ದ.ಕ. ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಇಂದಿಗೂ ಪ್ರಕೃತಿಯೊಂದಿಗೆ ಅವಿನಾಭಾವ ನಂಟು ಇಟ್ಟುಕೊಂಡಿದ್ದು ಕಾಡಿನಲ್ಲಿ ದೊರೆಯುವ ವಸ್ತುಗಳಿಂದ ಬುಟ್ಟಿಗಳನ್ನು ಹೆಣೆದು ಜೀವನ ಸಾಗಿಸುತ್ತಿದ್ದಾರೆ.
ಆಧುನಿಕತೆಯ ಇಂದಿನ ದಿನಗಳಲ್ಲೂ ಕೊರಗ ಸಮುದಾಯ ತನ್ನ ಕುಲಕಸುಬಿನಿಂದ ಪೂರ್ಣಪ್ರಮಾಣದಲ್ಲಿ ವಿಮುಕ್ತವಾಗಿಲ್ಲ. ಸಮುದಾಯದ ಹಿರಿಯರು ಇಂದಿಗೂ ಕಾಡಿಗೆ ಹೋಗಿ ಬಿಳಲುಗಳನ್ನು ತಂದು ಅದರಿಂದ ಬುಟ್ಟಿ ಹೆಣೆದು ತಮ್ಮ ಹೊಟ್ಟೆ ಹೊರೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಕಾಡಿಗೆ ತೆರಳಿ ಬಿಳಲುಗಳನ್ನು ತಂದರೆ ಇನ್ನು ಕೆಲವರು ಬಿದಿರನ್ನು ಸಿಗಿದು ಹದಗೊಳಿಸಿ ಬುಟ್ಟಿಗಳನ್ನು ತಯಾರು ಮಾಡುತ್ತಾರೆ. ಬಳಿಕ ಕೃಷಿಕರ ಬಳಿಗೆ ಹೋಗಿ ಮಾರಾಟ ಮಾಡುತ್ತಾರೆ.
ಕೃಷಿಕರು ಹಟ್ಟಿಗೊಬ್ಬರ ತುಂಬಿಸಲು ಈ ಬುಟ್ಟಿಗಳನ್ನು ಬಳಸುತ್ತಾರೆ. ಇದರಲ್ಲಿ ಎರಡು ರೀತಿಯ ಬುಟ್ಟಿಗಳಿವೆ. ಒಂದು ಸಣ್ಣ ಪ್ರಮಾಣದ ಹಾಗೂ ಇನ್ನೊಂದು ದೊಡ್ಡ ಪ್ರಮಾಣದ ಬುಟ್ಟಿ. ಗಾತ್ರಕ್ಕೆ ಅನುಗುಣವಾಗಿ ಬೆಲೆ ಇದೆ ಎನ್ನುತ್ತಾರೆ ಕಡಬ ತಾಲೂಕಿನ ಪೆರಾಬೆ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಬುಟ್ಟಿ ನೇಯುವ ಐತ್ತ ಮತ್ತು ಬಾಬು.
ಸ್ವಂತ ಸೂರಿಲ್ಲ
ಕಾಡಿನ ನಡುವೆ ಬದುಕುವ ಈ ಸಮಾಜಕ್ಕೆ ಮನೆ, ಜಾಗ ಮತ್ತಿತರ ಸೌಲಭ್ಯ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಬಹುತೇಕ ಕುಟುಂಬಗಳು ಇಂದಿಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂದಿಗೂ ಸ್ವಂತ ನಿವೇಶನ, ಮನೆಯೂ ಇಲ್ಲದ ಅನೇಕ ಕೊರಗ ಕುಟುಂಬಗಳು ಇವೆ.
ಜನಸಂಖ್ಯೆ ಕ್ಷೀಣ
ದ.ಕ. ಜಿಲ್ಲೆಯಲ್ಲಿ 4 ಸಾವಿರದಷ್ಟಿರುವ ಕೊರಗ ಜನಾಂಗ ಕಡಬ ತಾಲೂಕಿನಲ್ಲಿ ಅಂದಾಜು 300-400ರಷ್ಟು ಮಾತ್ರ ಇದೆ. ಪುತ್ತೂರಿನಲ್ಲಿ 107 ಕುಟುಂಬಗಳು, ಬಂಟ್ವಾಳದಲ್ಲಿ 80 ಕುಟುಂಬಗಳು ಹೀಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದ.ಕ.-ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಹರಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊರಗರಲ್ಲಿಯೂ ಕುಲಕಸುಬು ನಿಧಾನಕ್ಕೆ ಮಾಯವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾಡಿಗೆ ತೆರಳಲು ಪ್ರಾಣಿಗಳಿಂದ ಎದುರಾಗುವ ತೊಂದರೆ, ಇನ್ನೊಂದೆಡೆ ಯುವಕರ ಮನೋಭಾವ ಬದಲಾಗಿದೆ. ಸಮುದಾಯದ ಸಂಘಟನೆಗಳಲ್ಲಿ ಯುವಕರಿಗೆ ಒಲವು ಕಡಿಮೆಯಾಗಿದೆ. ಮನೆ ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಪೇಟೆ-ಪಟ್ಟಣಗಳಲ್ಲಿ ಕೆಲಸ ಮಾಡುವ ಯುವಕರಿಗೆ ಇದರ ಅರಿವೇ ಇಲ್ಲ. ಈಗಲೂ ಜಾಗ, ಮನೆಯೇ ಇಲ್ಲದ ಕೊರಗ ಕುಟುಂಬಗಳು ಸಾಕಷ್ಟಿವೆ. ಸರ್ಕಾರ ಕೊಡುವ ಸೌಲಭ್ಯಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.
— ಕೆ.ಪುತ್ರನ್, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕ