ಗುರುಪುರ ಕೈಕಂಬ ಪೋಂಪೈ ದ್ವಾರದ ಎದುರು ಮೇಲ್ಗಡೆಯಿಂದ ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ.
ಗುರುಪುರ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬ ಪೋಂಪೈ ದ್ವಾರದ ಎದುರು ಅಂಡರ್‌ಪಾಸ್ ನಿರ್ಮಿಸಬೇಕೆಂದು ಆಗ್ರಹಿಸಿ ಕೈಕಂಬ ನಾಗರಿಕ ಹೋರಾಟ ಸಮಿತಿ ಹಲವು ಬಾರಿ ನಡೆಸಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೈಕಂಬದಲ್ಲಿ ಅಂಡರ್‌ಪಾಸ್ ಕಾಮಗಾರಿಗೆ ಎನ್‌ಎಚ್ ಹಸಿರು ನಿಶಾನೆ ತೋರಿಸಿದೆ.
ಸದ್ಯ ಗುರುಪುರ-ಕೈಕಂಬದಲ್ಲಿ ಪೇಟೆ ಇಬ್ಭಾಗಿಸುವ ರೀತಿಯಲ್ಲಿ ಮಣ್ಣು ತುಂಬಿಸಿ, ಗೋಡೆ ರಚಿಸಿ ನಿರ್ಮಿಸಲಾದ ಎತ್ತರದ ಹೆದ್ದಾರಿಯಿಂದ ಕೈಕಂಬ ಪೇಟೆಯ ವ್ಯಾಪಾರ-ವಹಿವಾಟಿಗೆ ಧಕ್ಕೆಯಾಗಲಿದೆ. ಅವೈಜ್ಞಾನಿಕ ಎನ್ನಲಾದ ಈ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ. ಕಂದಾವರ, ಆದ್ಯಪಾಡಿಗೆ ಹೋಗುವವರು 1 ಕಿ.ಮೀ. ಸುತ್ತಿಬಳಸಿ ಸಂಚರಿಸಬೇಕಾಗುತ್ತದೆ. ಇಲ್ಲಿ ವಾಮಂಜೂರಿನಲ್ಲಿ ನಡೆಸಿದಂತೆ ತೆರೆದ ಹೆದ್ದಾರಿ ನಿರ್ಮಿಸಬೇಕು. ಇಲ್ಲವೇ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತ ಬಂದಿದ್ದಾರೆ.
ಅಂಡರ್‌ಪಾಸ್ ನಿರ್ಮಿಸಬೇಕೆನ್ನುವ ಹೋರಾಟದಲ್ಲಿ ಪಕ್ಷ, ಧರ್ಮ, ಜಾತ್ಯತೀತವಾಗಿ ವ್ಯಾಪಾರಿಗಳು ಮತ್ತು ರಿಕ್ಷಾ ಚಾಲಕರ ಸಹಿತ ಸಂಘಟನೆಯವರು ಪಾಲ್ಗೊಂಡಿದ್ದಾರೆ. ಕೈಕಂಬ ನಾಗರಿಕ ಹೋರಾಟ ಸಮಿತಿಯು ಫೆ.7ರಿಂದ 3 ದಿನಗಳ ಸತತ ಹಕ್ಕೊತ್ತಾಯ ಹೋರಾಟ ನಡೆಸಿತ್ತು.
ಈ ಮಧ್ಯೆ ಸ್ಥಳೀಯ ಶಾಸಕ ಡಾ.ಭರತ್ ಶೆಟ್ಟಿ ಯವರು ಸಂಸದ ಕ್ಯಾ.ಬ್ರಿಜೇಶ್ ಚೌಟರ ಮೂಲಕ ಕೇಂದ್ರದ ಹೆದ್ದಾರಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಸಮಿತಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಫೆ.20ರಂದು ಸುರೇಶ್ ಎಂಬುವರು ಪೋಂಪೈ ದ್ವಾರದ ಎದುರು ಅಂಡರ್‌ಪಾಸ್ ನಿರ್ಮಿಸಿ, ಸಾರ್ವಜನಿಕರಿಗೆ ಉಪಕಾರ ಮಾಡಬೇಕೆಂದು ಆಗ್ರಹಿಸಿ ಕಾಮಗಾರಿ ಸ್ಥಳದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ್ದರು.
ಇದು ಹೋರಾಟಕ್ಕೆ ಸಿಕ್ಕ ಜಯ ಎಂದು ಹೋರಾಟ ಸಮಿತಿಯ ಪ್ರಮುಖರು ಶಾಸಕ, ಸಂಸದ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ, ಕೈಕಂಬದಲ್ಲಿ ಆದಷ್ಟು ಶೀಘ್ರ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಅಂತಿಮವಾಗದ ವಿನ್ಯಾಸ
ಗುರುಪುರ ಕೈಕಂಬ ಪೋಂಪೈ ದ್ವಾರದ ಎದುರು ಮೇಲ್ಗಡೆಯಿಂದ ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ. ಇದರ ಎರಡು ಪಾರ್ಶ್ವದಲ್ಲಿರುವ ಸರ್ವೀಸ್ ರಸ್ತೆಗಳ ಸಂಪರ್ಕಿಸಲು ಅಂಡರ್‌ಪಾಸ್ ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ಎನ್‌ಎಚ್ ಪ್ರಾಧಿಕಾರ ಅನುಮತಿ ನೀಡಿದೆ.
ಅಂಡರ್‌ಪಾಸ್‌ನ ವಿನ್ಯಾಸ ಇನ್ನೂ ನಿರ್ಧರಿಸದಿದ್ದರೂ, ಸಾಮಾನ್ಯವಾಗಿ 7 ಅಡಿ ಎತ್ತರ ಮತ್ತು 15 ಅಡಿ ಅಗಲದ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಇದರಲ್ಲಿ ಶಾಲಾ ಬಸ್‌ಗಳ ಸಹಿತ ಮಿನಿ ಬಸ್‌ಗಳು, ಕಾರುಗಳು, ದ್ವಿಚಕ್ರ-ತ್ರಿಚಕ್ರ ವಾಹನಗಳು(ಸಣ್ಣ ವಾಹನಗಳು) ಹಾಗೂ ಪಾದಚಾರಿ ಸಂಚಾರಕ್ಕೆ ಅವಕಾಶವಿರುತ್ತದೆ ಎಂದು ಎನ್‌ಎಚ್ ಮೂಲವೊಂದು ಹೇಳಿದೆ.