ಉಡುಪಿ: ಜಿಲ್ಲೆಯ ಪ್ರಮುಖ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಕೋಟ್ಯಂತರ ರೂ. ಹಫ್ತಾ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕುತ್ತಿದ್ದ ಭೂಗತ ಪಾತಕಿ ಹೇಮಂತ ಪೂಜಾರಿಗೆ ಉದ್ಯಮಿಗಳ ಮಾಹಿತಿ ಸರಬರಾಜು ಮಾಡುತ್ತಿದ್ದ ಮುಖ್ಯ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಎಮಾರ್ಳು ಬಡಾ ಗ್ರಾಮದ ಬಟ್ರತೋಟ ನಿವಾಸಿ ಸುರೇಶ್ ಅಮೀನ್ (38) ಬಂಧಿತ ಆರೋಪಿ.
ಬಂಧಿತ ಆರೋಪಿ ಸುರೇಶ್ ಅಮೀನ್, ಪಡುಬಿದ್ರೆ, ಶಿರ್ವ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಪ್ರಮುಖ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ಹಾಗೂ ಅವರ ಖಾಸಗಿ ಮಾಹಿತಿಗಳನ್ನು ಭೂಗತ ಪಾತಕಿ ಹೇಮಂತ ಪೂಜಾರಿಗೆ ತಲುಪಿಸುತ್ತಿದ್ದ. ಇದನ್ನು ಆಧರಿಸಿ ಹೇಮಂತ ಪೂಜಾರಿ ಉದ್ಯಮಿಗಳಿಗೆ ಕರೆ ಮಾಡಿ ಕೋಟ್ಯಂತರ ರೂ.ಗಳಿಗೆ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 5, ಶಿರ್ವದಲ್ಲಿ 1, ಕಾಪು 1 ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ 1 ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.
ಉದ್ಯಮಿ ಕೊಲೆಗೆ ಸಂಚು
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ತಾಂತ್ರಿಕ ಸಾಾಧಾರಗಳ ನೆರವಿನಿಂದ ಆರೋಪಿ ಸುರೇಶ್ ಅಮೀನ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಹಫ್ತಾ ಹಣ ನೀಡದೆ, ಫೋನ್ ಕರೆಗಳನ್ನು ಸ್ವೀಕರಿಸದ ಉದ್ಯಮಿಯೊಬ್ಬರನ್ನು ಕೊಲೆ ಮಾಡಲು ಹೇಮಂತ ಪೂಜಾರಿ ಹಾಗೂ ಸುರೇಶ್ ಅಮೀನ್ ಒಳಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
4.13 ಲಕ್ಷ ರೂ. ನಗದು ಜಪ್ತಿ
ಭೂಗತ ಪಾತಕಿ ಹೇಮಂತ ಪೂಜಾರಿ ಆರೋಪಿ ಸುರೇಶ್ಗೆ 5 ಲಕ್ಷ ರೂ. ಕಳುಹಿಸಿಕೊಟ್ಟಿದ್ದ. ಅದರಲ್ಲಿ ಖರ್ಚು ಮಾಡಿ ಉಳಿದಿದ್ದ 4,13,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಕೃತ್ಯದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.