ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಬೆಳ್ತಂಗಡಿ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಬುಧವಾರ ತಡರಾತ್ರಿ ಬ್ರಹ್ಮರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ನೇತೃತ್ವದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದೊಂದಿಗೆ ಮಾ.2ರಂದು ಆರಂಭವಾದ ಬ್ರಹ್ಮಕಲಶೋತ್ಸವ ಹಲವು ಕಾರ್ಯಕ್ರಮಗಳಿಗೆ, ಜನತೆಯ ಒಗ್ಗಟ್ಟು, ಸಹಕಾರಕ್ಕೆ ಸಾಕ್ಷಿಯಾಯಿತು. ಪ್ರತಿದಿನ ವೈದಿಕ ಕಾರ್ಯಕ್ರಮ, ಸ್ವಾಮೀಜಿಗಳ, ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ, ನಿರಂತರ ಅನ್ನದಾಸೋಹ, ಶ್ರೀವಿಷ್ಣು ಸಹಸ್ರನಾಮ ಪಠಣ ಬ್ರಹ್ಮಕಲಶದ ಮೆರಗನ್ನು ಹೆಚ್ಚಿಸಿದವು.
ಬುಧವಾರ ಉಜಿರೆ ರತ್ನವರ್ಮ ಕ್ರೀಡಾಂಗಣದಿಂದ ದೇವಳದವರೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಧರ್ಮಯಾನ ಶೋಭಾಯಾತ್ರೆ ಬ್ರಹ್ಮಕಲಶೋತ್ಸವಕ್ಕೆ ಹೊಸ ಮೆರುಗು ನೀಡಿತು. ನಾನಾ ಭಾಗಗಳಿಂದ ಪ್ರತಿದಿನ ಹಸಿರುವಾಣಿ ಹೊರೆಕಾಣಿಕೆ ಹರಿದು ಬಂತು. ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬುಧವಾರ ತಡರಾತ್ರಿ ಉಜಿರೆ ಬೆಡಿ, ಶ್ರೀ ಜನಾರ್ದನ, ಶ್ರೀ ಮಂಜುಳೇಶ ದೇವರ ಉತ್ಸವ, ನೂತನ ಬ್ರಹ್ಮರಥದಲ್ಲಿ ಉಭಯ ದೇವರ ಬ್ರಹ್ಮರಥೋತ್ಸವ, ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.
ರಥೋತ್ಸವದ ಬಳಿಕ ಅಶ್ವತ್ಥಕಟ್ಟೆಯಲ್ಲಿ ಬ್ರಹ್ಮಕಲಶದ ಕಾರ್ಯಾಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ನೇತೃತ್ವದಲ್ಲಿ 10 ಸಾವಿರದಷ್ಟು ಮಂದಿಗೆ ಸೀರೆ ಹಾಗೂ ಧೋತಿ ವಿತರಿಸಲಾಯಿತು. ಉಜಿರೆಯಲ್ಲಿ ಒಂಬತ್ತು ದಿನಗಳ ಹಬ್ಬದ ವಾತಾವರಣ ಕಂಡುಬಂತು.