ಮಂಗಳೂರು ವಿವಿ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡ ಉಜಿರೆ ಎಸ್‌ಡಿಎಂ ಕಾಲೇಜಿನ ಪುರುಷರು, ಮಹಿಳೆಯರ ತಂಡ. 
ಉಡುಪಿ

ಉಜಿರೆ ಎಸ್‌ಡಿಎಂ ಕಾಲೇಜು ಚಾಂಪಿಯನ್ಸ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕೊಣಾಜೆ ವಿವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿ ಮಟ್ಟದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ನೆಟ್‌ಬಾಲ್ ಪಂದ್ಯದಲ್ಲಿ ಉಜಿರೆ ಎಸ್‌ಡಿಎಂ (ಸ್ವಾಯತ್ತ) ಕಾಲೇಜಿನ ಪುರುಷ ಹಾಗೂ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪುರುಷರ ತಂಡ ಫೈನಲ್ ಪಂದ್ಯದಲ್ಲಿ ಮೂಡುಬಿದಿರೆಯ ಧವಳ ಕಾಲೇಜು ವಿರುದ್ಧ ಸೆಣಸಾಡಿ 23-17 ಅಂಕಗಳ ಅಂತರದಿಂದ ಜಯ ಸಾಧಿಸಿತು. ಉಜಿರೆ ಎಸ್‌ಡಿಎಂ ಮಹಿಳಾ ತಂಡ ಫೈನಲ್‌ನಲ್ಲಿ ಮೂಡುಬಿದಿರೆ ಧವಳಾ ಕಾಲೇಜು ತಂಡವನ್ನು ಎದುರಿಸಿ 20 - 09 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿ ನೀಡಿದ್ದಾರೆ. ದೈಹಿಕ ಶಿಕ್ಷಣ ಉಪನ್ಯಾಸಕಿ ಶಾರದಾ ತಂಡಗಳನ್ನು ಸಂಯೋಜಿಸಿದರು.
ಪುರುಷರ ತಂಡದಲ್ಲಿ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ಚಿಂತನ್, ದಿನೇಶ್, ಪುನೀತ್, ಕೀರ್ತನ್, ಮಣಿಕಂಠ್, ಸಾತ್ವಿಕ್, ಗಣೇಶ್, ಪ್ರವೀಣ್, ಮನೋಜ್, ಅಭಿಷೇಕ್, ಶಯಾನ್ ಹಾಗೂ ಶ್ರೀಕಾಂತ್ ಇದ್ದರು. ಮಹಿಳೆಯರ ತಂಡದಲ್ಲಿ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ವರ್ಷಿತಾ, ರಶ್ಮಿ ಎಸ್., ಮನೀಷಾ, ಸುರಕ್ಷಾ ಆಚಾರ್ಯ, ಪಲ್ಲವಿ, ಧನುಶ್ರೀ ಎಚ್.ಆರ್., ಭೂಮಿಕಾ ಶೆಟ್ಟಿ, ಸಹನಾ, ಪೂಜಾಶ್ರೀ ಹಾಗೂ ಸಿಂಚನಾ ಇದ್ದರು.
ವಿಜೇತ ತಂಡಕ್ಕೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ., ಎಸ್‌ಡಿಎಂ ಕ್ರೀಡಾ ಸಂಘ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾರದಾ, ಸುದೀನ್ ಪೂಜಾರಿ ಅಭಿನಂದನೆ ತಿಳಿಸಿದ್ದಾರೆ.

ಸತತ 16 ವರ್ಷಗಳಿಂದ ಮೇಲುಗೈ

ಮಂಗಳೂರು ವಿವಿ ಮಂಗಳೂರು ವಿಭಾಗದ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ತಂಡ ಸತತ 16 ವರ್ಷಗಳಿಂದ ಪುರುಷ ಮತ್ತು ಮಹಿಳೆಯರ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿಕೊಂಡು ಬಂದಿದೆ. 2011ರಿಂದ ನಿರಂತರವಾಗಿ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.