ಕುಂದಾಪುರ ಪುರಸಭೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪುರಸಭೆಯ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ ಐದಾರು ವಾರ್ಡ್‌ಗಳನ್ನು ಒಳಚರಂಡಿ ಯೋಜನೆ ತಲುಪಿಲ್ಲ. ಎಲ್ಲ ವಾರ್ಡ್‌ನ ಎಲ್ಲ ಮನೆಗಳಿಗೂ ಲಭ್ಯ ಅನುದಾನದಲ್ಲಿ ಯುಜಿಡಿ ಸಂಪರ್ಕ ಕಲ್ಪಿಸಬೇಕಿದೆ. ಹೆಚ್ಚುವರಿ ಅಗತ್ಯವಿರುವ 33 ಕೋಟಿ ರೂ. ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕರು, ಯುಜಿಡಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಕುಂದಾಪುರ ಪುರಸಭೆಗೆ ಗುರುವಾರ ಭೇಟಿ ನೀಡಿದ ಅವರು ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಸಿಪಿಎಂ ನಾಯಕ ಸುರೇಶ್ ಕಲ್ಲಾಗರ, ದ್ರವ ತ್ಯಾಜ್ಯ ಘಟಕ ನಿರ್ಮಾಣ ಯೋಜನೆಗೆ ನಮ್ಮ ವಿರೋಧವಿಲ್ಲ ಆದರೆ ಜನವಸತಿ ಪ್ರದೇಶದಿಂದ ಸ್ಥಳಾಂತರಿಸಬೇಕು ಎಂದರು. ಆಸ್ಪತ್ರೆ ವಾರ್ಡ್‌ಗೆ ಪೈಪ್ ಲೈನ್ ಹಾಕಿಲ್ಲ ಎಂದು ದೇವಕಿ ಸಣ್ಣಯ್ಯ, ಖಾರ್ವಿಕೇರಿಯ ಮೂರು ವಾರ್ಡ್‌ಗಳನ್ನು ಡಿಪಿಆರ್‌ನಲ್ಲೇ ಅಳವಡಿಸಿಲ್ಲ. ಈಗ ಹೊಸ ಯೋಜನೆಯಲ್ಲೂ ಸೇರಿಸಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು.
ಹುಂಚಾರುಬೆಟ್ಟು ಪ್ರದೇಶದಲ್ಲಿ ವೆಟ್ ವೆಲ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿರುವುದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.
ಮುಖ್ಯಾಧಿಕಾರಿಗೆ ಇಲ್ಲಿನ ಕಾಳಜಿ ಇಲ್ಲ!
ಮುಖ್ಯಾಧಿಕಾರಿ ಬೇರೆ ಜಿಲ್ಲೆಯವರಾಗಿದ್ದು ಅವರಿಗೆ ಇಲ್ಲಿನ ಬಗ್ಗೆ ಕಾಳಜಿ ಇಲ್ಲ. ಯುಜಿಡಿಯಿಂದಾಗಿ ರಸ್ತೆ ಹದಗೆಟ್ಟಿದೆ. ಸಾರ್ವಜನಿಕರು ಸದಸ್ಯರನ್ನು ದೂರುತ್ತಾರೆ. ಅಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಮುತುವರ್ಜಿ ಇಲ್ಲ ಎಂದು ಶ್ರೀಧರ ಶೇರೆಗಾರ್ ಹೇಳಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸ್ವರೂಪಾ, ಮುಖ್ಯಾಧಿಕಾರಿ ಅವರ ಮಿತಿಯಲ್ಲಿ ಕೆಲಸ ಮಾಡುತ್ತಾರೆ. ಬೇರೆ ಜಿಲ್ಲೆಯವರೆಂದು ದೂರಬೇಡಿ ಎಂದರು.
13 ಕೋಟಿ ರೂ. ಅನುದಾನ ವಾಪಸ್ ಹೋಗಲಿದೆ
ಯುಜಿಡಿ ತ್ಯಾಜ್ಯ ಜಲ ಸಂಗ್ರಹದ ಸ್ಥಳ ಪರಿಶೀಲಿಸಿದ್ದು, ಎಸ್ಟಿಪಿಗೆ ಜಾಗ ನೀಡದ ಕಾರಣ ಈ ಹಿಂದಿನ ಗುತ್ತಿಗೆದಾರರು ಕಾಮಗಾರಿ ಆರಂಭಿಸದೆ ಹೋಗಿದ್ದಾರೆ. ಹೊಸದಾಗಿ ಮೊತ್ತ ಮಂಜೂರು ಮಾಡಲು ಈಗ ಆಗುತ್ತಿಲ್ಲ. ಇರುವ ಮೊತ್ತದಲ್ಲೇ ಕಾಮಗಾರಿ ನಡೆಸಲು ಸರ್ಕಾರ ಸೂಚಿಸಿದೆ. ಪುರಸಭೆಯ ಆಡಳಿತ ಮಂಡಳಿ ನಿರ್ಣಯಿಸಿ ಗುರುತಿಸಿರುವ ಜಾಗ ಬದಲಾಯಿಸಲು ಮತ್ತೆ ಆಡಳಿತ ಮಂಡಳಿಯೇ ಅಧಿಕಾರಕ್ಕೆ ಬರಬೇಕಾಗುತ್ತದೆ. ಆಗ ಈಗ ಮಂಜೂರಾಗಿರುವ 13 ಕೋಟಿ ರೂ. ಸರ್ಕಾರಕ್ಕೆ ವಾಪಸ್ ಹೋಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಮೋಹನದಾಸ ಶೆಣೈ ಮಾತನಾಡಿ, 48 ಕೋಟಿ ರೂ. ಯೋಜನೆಯಲ್ಲಿ 13 ಕೋಟಿ ರೂ. ಇದೆ. ಇನ್ನೂ 33 ಕೋಟಿ ರೂ. ಬೇಕು. ಅನುದಾನ ದೊರೆಯುತ್ತಿಲ್ಲ. ಶಾಸಕರು ಪ್ರಯತ್ನಿಸುತ್ತಿದ್ದು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಡಿಸಿ ಕೂಡಾ ಈ ಬಗ್ಗೆ ಮುತುವರ್ಜಿ ವಹಿಸಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.