ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಮಾನ್ಯಾಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಪ್ರಾಯೋಜಕ ದೇವಾನಂದ ಉಪಾಧ್ಯಾಯ ಉದ್ಘಾಟಿಸಿದರು. ಸಂಜೀತ್​ ಪ್ರಕಾಶ್​ ರಾವ್​, ಎಂ.ಗಂಗಾಧರ್​ ರಾವ್​, ನಾರಾಯಣ ಎಂ. ಹೆಗಡೆ, ಮುರಳಿ ಕಡೆಕಾರ್​, ವಿಶ್ವೇಶ್ವರ ಅಡಿಗ, ಮಹಾಲಿಂಗ ನಾಯ್ಕ್​, ದೇವರಾಜ್​ ಶೆಟ್ಟಿಗಾರ್​, ನಾಗರಾಜ್​ ಹೆಬ್ಬಾರ್​, ಯು. ವಿಶ್ವನಾಥ್​ ಶೆಣೈ, ಭುವನಪ್ರಸಾದ್​ ಹೆಗ್ಡೆ ಇತರರಿದ್ದರು. 
ಉಡುಪಿ

ಸಹಾಯ ಮನೋಧರ್ಮ ಉಳ್ಳವರ ಕರ್ತವ್ಯ

* ದೇವಾನಂದ ಉಪಾಧ್ಯಾಯ ಅನಿಸಿಕೆ

* ಯಕ್ಷಗಾನ ಕಲಾರಂಗದ 96ನೇ ಮನೆ ಹಸ್ತಾಂತರ

ಉಡುಪಿ: ಉಪಕಾರ ಮಾಡಿದ್ದೇನೆಂಬ ಭ್ರಮೆ ನನಗಿಲ್ಲ. ಯಕ್ಷಗಾನ ಕಲಾರಂಗ ಮಾಡುವ ಒಳ್ಳೆಯ ಕೆಲಸಕ್ಕೆ ಸಹಕರಿಸಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ಸಂತಸವಿದೆ. ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕಾದುದು ಕರ್ತವ್ಯ. ಆಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಸಿಂಡಿಕೇಟ್​ ಬ್ಯಾಂಕ್​ನ ನಿವೃತ್ತ ಜಿಎಂ ಕಾರ್ಕಳ ಕಲ್ಮಠದ ದೇವಾನಂದ ಉಪಾಧ್ಯಾಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಪದ್ಮಾವತಿ ಮತ್ತು ದಿ. ಮಹಾಬಲ ಮರಕಾಲ ಇವರ ಪುತ್ರಿ ಮಾನ್ಯಾ ಎಂ. ಇವಳಿಗೆ ಬೈಂದೂರು ತಾಲೂಕಿನ ಪಡುವರಿಯಲ್ಲಿ ತನ್ನ ಮಾತಾ-ಪಿತೃರಾದ ಸತ್ಯಭಾಮಾ ಮತ್ತು ವೆಂಕಟನರಸಿಂಹ ಉಪಾಧ್ಯಾಯ ಸ್ಮರಣಾರ್ಥ ಮತ್ತು ಪತ್ನಿ ನಮಿತಾ ಉಪಾಧ್ಯಾಯ ಪ್ರಾಯೋಜಕತ್ವದಲ್ಲಿ ಪುನರ್​ ನವೀಕರಣಗೊಂಡ 'ಭಾನು' ಮನೆಯನ್ನು ಭಾನುವಾರ (ಮೇ 24) ಉದ್ಘಾಟಿಸಿ, ಹಸ್ತಾಂತರಿಸಿ ಮಾತನಾಡಿದರು.
ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಮಾನ್ಯಾಳಿಗೆ ದೇವಾನಂದ ಉಪಾಧ್ಯಾಯ ಅವರು ಮನೆ ಹಸ್ತಾಂತರಿಸಿದರು.
ಸಂಸ್ಥೆಯ ಬದ್ಧತೆ ಶ್ಲಾಘನೆ
ಸಾಂದೀಪನ್​ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹಾಲಿಂಗ ನಾಯ್ಕ್​, ವಕೀಲ ದೇವರಾಜ್​ ಶೆಟ್ಟಿಗಾರ್​, ಅಪ್ನಾ ಹಾಲಿಡೇಸ್​ನ ನಾಗರಾಜ್​ ಹೆಬ್ಬಾರ್​ ಮರವಂತೆ ಮಾತನಾಡಿ, ವಿದ್ಯಾರ್ಥಿನಿ ಮಾನ್ಯಾಳ ಸಾಧನೆ ಹಾಗೂ ಯಕ್ಷಗಾನ ಕಲಾರಂಗದ ಪಾರದರ್ಶಕ ವ್ಯವಹಾರ, ಕೆಲಸದ ಬದ್ಧತೆಯನ್ನು ಶ್ಲಾಘಿಸಿದರು.
ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್​, ಸದಸ್ಯರಾದ ಯು. ವಿಶ್ವನಾಥ್​ ಶೆಣೈ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ವಿಜಯಕುಮಾರ್​ ಮುದ್ರಾಡಿ, ಭುವನಪ್ರಸಾದ್​ ಹೆಗ್ಡೆ, ಅನಂತರಾಜ್​ ಉಪಾಧ್ಯಾಯ, ಹಿರಿಯಣ್ಣ ಕಿದಿಯೂರು, ಪ್ರಭಾಕರ್​ ಬಂಡಿ, ಪ್ರಸನ್ನ ಹೆಗಡೆ, ಬೈಂದೂರು ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ವೃಂದದವರು, ಕೊಲ್ಲೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ ಭಟ್​ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾನ್ಯಾಳ ಅಪೇಕ್ಷೆಯಂತೆ ಅವಳ ನೆಚ್ಚಿನ ಶಿಕ್ಷಕಿ ಕವಿತಾ ಅವರ ಜನ್ಮದಿನ  ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್​ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
"

ಯಕ್ಷಗಾನ ಕಲಾರಂಗದ ಸಮಾಜಮುಖಿ ಕೆಲಸದ ಕುರಿತು ಕೇಳಿ ಆಶ್ಚರ್ಯವಾಯಿತು. ಒಂದು ಸಂಸ್ಥೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಳಕಳಿಯಿಂದ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎನ್ನುವುದಕ್ಕೆ ಈ ಸಂಸ್ಥೆ ಅತ್ಯುತ್ತಮ ಉದಾಹರಣೆ.

— ಸಂಜೀತ್​ ಪ್ರಕಾಶ್​ ರಾವ್​. ಸಂದೀಪನ್​ ವಿದ್ಯಾ ಸಂಸ್ಥೆಯ ಅಧ್ಯಕ್ಷ.