ಹಿರಿಯ ರಂಗಕರ್ಮಿ ಪ್ರೊಫೆಸರ್ ರಾಮದಾಸ್.
* ಶಿಕ್ಷಕನೊಳಗಿದ್ದ ರಂಗ ನಾಯಕ
* ಪಾಠದೊಂದಿಗೆ ಅಭಿನಯ ಕಾಯಕ
ಉಡುಪಿ: ಶ್ರೇಷ್ಠ ನಾಟಕಗಾರ, ನಿರ್ದೇಶಕ, ಹಿರಿಯ ರಂಗಕರ್ಮಿ, ಕವಿ, ಸಾಹಿತಿಯಾಗಿದ್ದ ಉಡುಪಿಯ ಪ್ರೊಫೆಸರ್ ರಾಮದಾಸ್ ಕುಂಡಂತಾಯ (86) ಡಿ.23ರಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಹಾಗೂ 'ರಂಗಭೂಮಿ (ರಿ.) ಉಡುಪಿ'ಯ ರಂಗನಟರಾಗಿ, ನಿರ್ದೇಶಕರಾಗಿ ಅಪಾರ ಕೊಡುಗೆ ನೀಡಿದ್ದರು.
ರಂಗಭೂಮಿಯ ಮುಖ್ಯ ಕಲಾವಿದ
ರಾಮದಾಸರು ರಂಗಭೂಮಿ (ರಿ.) ಉಡುಪಿಯ ಮುಖ್ಯ ಕಲಾವಿದರಾಗಿದ್ದರು. ವೀರ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ, ಓಡೀಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ ಹೀಗೆ ಇನ್ನೂ ಹಲವು ನಾಟಕಗಳಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದರು. ಗಿರೀಶ್ ಕಾರ್ನಾಡರ ತುಘಲಕ್ ನಾಟಕದ ತುಘಲಕನಾಗಿ, ಈಡಿಪಸ್ ನಾಟಕದ ಈಡಿಪಸ್ ಆಗಿ, ಅಂಧಯುಗದಲ್ಲಿ ಅಶ್ವತ್ಥಾಮನಾಗಿ, ಗೋವಿಂದ ಪೈಗಳ 'ಹೆಬ್ಬೆರಳು' ನಾಟಕದಲ್ಲಿ ಹಿರಣ್ಯಧನುವಾಗಿ ನಟಿಸಿದರು. ಆಕಾಶವಾಣಿಯಲ್ಲಿ ನೂರಾರು ಪ್ರಯೋಗ ನೀಡಿದರು. ಸಂಕ್ರಾಂತಿ ನಾಟಕದ 'ಉಜ್ಜ' ಪಾತ್ರ, ಸೂರ್ಯ ಶಿಕಾರಿಯ ರಾಜ, ಹರಕೆಯ ಕುರಿ ನಾಟಕದ 'ರಾಜಕಾರಣಿ'ಯ ಪಾತ್ರ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿದೆ.
ನಾಟಕಗಳ ನಿರ್ದೇಶನ
ತಲೆದಂಡ, ನಾಯೀಕತೆ, ಓಡೀಸ್ಸಿ, ಸೂರ್ಯ ಶಿಕಾರಿ ನಾಟಕಗಳ ನಿರ್ದೇಶನ ಮಾಡಿದ್ದರು. ಜೋಕುಮಾರ ಸ್ವಾಮಿ, ಸಂಕ್ರಾಂತಿ ನಾಟಕವನ್ನು ಕುತ್ಪಾಡಿ ಆನಂದ ಗಾಣಿಗ ಅವರೊಂದಿಗೆ ಜಂಟಿಯಾಗಿ ನಿರ್ದೇಶಿಸಿದ್ದರು. ಇವರು ರಚಿಸಿದ 'ಸಾಕ್ಷಾತ್ಕಾರ' ನಾಟಕ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೊಳಿಸಿತ್ತು. ರಂಗಭೂಮಿ ತಂಡವು ಅದನ್ನು ಪ್ರೊ.ಉದ್ಯಾವರ ಮಾಧವ ಆಚಾರ್ಯ ನಿರ್ದೇಶನದಲ್ಲಿ ರಂಗಕ್ಕೆ ತಂದಿತ್ತು. ರಂಗಭೂಮಿ ಸಂಸ್ಥೆಯು 2000ನೇ ಇಸವಿಯಲ್ಲಿ 'ರಂಗ ವಿಭೂಷಣ' ಬಿರುದಿನೊಂದಿಗೆ ಪ್ರಶಸ್ತಿ ನೀಡಿತ್ತು. 2015ರಲ್ಲಿ ನಡೆದ 'ರಂಗಭೂಮಿ ಆನಂದೋತ್ಸವ'ದಲ್ಲೂ ಸನ್ಮಾನಿಸಿ ಗೌರವಿಸಿತ್ತು.
ಸಾಹಿತ್ಯ ಕೃಷಿ ಅಪಾರ
ಭಸ್ಮಾಸುರ, ಹಾಡು-ಪಾಡು, ಋತಗೀತಾಮೃತ ಮೊದಲಾದ ಏಳು ಕವನ ಸಂಕಲನ ರಚಿಸಿದ್ದಾರೆ. ಇವಳು, ಕರ್ತಾರನ ಕಮ್ಮಟ, ಮುಕ್ತಪ್ರೇಮ ಕಾದಂಬರಿಗಳು. ಸೇಡು, ಹತ್ತು ಕಥೆಗಳು (ಕಥಾಸಂಕಲನ). ಗುಂಡಾಭಟ್ಟನ ಖಂಡೀ ಅಂಗಡಿ, ಕಾಲಲಬ್ಧಿ ಮುಂತಾದ 15 ಏಕಾಂಕ ನಾಟಕ. ಥಾಮಸ್ನ ಗಾಸ್ಪೆಲ್ಸ್, ಜೆ.ಕೆ. ಉಪನ್ಯಾಸಗಳು, ಸಖಾರಾಂ ಬೈಂಡರ್ ಅನುವಾದಗಳು, ಭೂಮಿಗೀತ ಕಾವ್ಯಪ್ರವೇಶ, ಅಧ್ಯಯನ, ರಂಗ-ಅಂತರಂಗ, ಚಿಂತನ ಮೊದಲಾದ ವಿಮರ್ಶಾ ಗ್ರಂಥ ಸೇರಿ 40ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.
ವಿವಿಧ ಪ್ರಶಸ್ತಿಗಳ ಗೌರವ
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಉಡುಪಿ ರಂಗಭೂಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಲಭಿಸಿದೆ.
ಹೋಟೆಲ್ನಲ್ಲಿ ಸಪ್ಲೈಯರ್ ಕೆಲಸ
ಉಡುಪಿ ತಾಲೂಕಿನ ಉಚ್ಚಿಲ ಗ್ರಾಮದಲ್ಲಿ 1940ರ ಫೆ..1ರಂದು ಜನಿಸಿದರು. ತಂದೆ ಗುರುರಾಜ ಕುಂಡಂತಾಯ, ತಾಯಿ ಸತ್ಯಭಾಮಾ. ತಂದೆಯ ಅಕಾಲ ಮರಣದಿಂದ ನಾಲ್ವರು ತಮ್ಮಂದಿರು, ಒಬ್ಬಳು ತಂಗಿ, ತಾಯಿಯನ್ನೊಳಗೊಂಡ ಸಂಸಾರದ ಹೊಣೆ ಹೊತ್ತರು. ಎಸ್ಎಸ್ಎಲ್ಸಿ ಮುಗಿಸಿ ದುಡಿಮೆಗಾಗಿ ಮೈಸೂರಿಗೆ ತೆರಳಿ ಅಲ್ಲಿನ ಇಂದ್ರಭವನ ಹೋಟೆಲ್ನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿದರು. ನಂತರ ಇಂದ್ರ ಕೆಫೆಗೆ ವರ್ಗಾವಣೆಗೊಂಡರು. ಮಾಲೀಕರ ಔದಾರ್ಯದಿಂದ ಓದಿಗೆ ಅವಕಾಶ ಲಭಿಸಿತು. ಪೂರ್ಣಾವಧಿ ಕೆಲಸ, ಅರೆಕಾಲಿಕ ವಿದ್ಯಾರ್ಥಿಯಾದರು. ಕೆಲಸ ಮಾಡುತ್ತಲೇ 1964ರಲ್ಲಿ ಪ್ರಥಮ ಸ್ಥಾನದೊಂದಿಗೆ ಬಿಎ ಪದವಿ ಮುಗಿಸಿದರು. 1966ರಲ್ಲಿ ಉಪಕುಲಪತಿಗಳ ಚಿನ್ನದ ಪದಕದೊಂದಿಗೆ ಎಂಎ ಪದವಿ ಪೂರೈಸಿದರು. ಬಳಿಕ 1966-69ರ ವರೆಗೆ ಮೂಲ್ಕಿ ವಿಜಯ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ನಡೆಸಿದರು. 1969ರಿಂದ ನಿವೃತ್ತಿಯವರೆಗೂ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.