ಧರ್ಮಪ್ರಾಂತ್ಯದ ದ್ವಿತೀಯ ಧಮಾರ್ಧ್ಯಕ್ಷರಾಗಿ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣ ಸಮಾರಂಭ.
ಉಡುಪಿ: ಧರ್ಮಪ್ರಾಂತ್ಯದ ದ್ವಿತೀಯ ಧಮಾರ್ಧ್ಯಕ್ಷರಾಗಿ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣ ಸಮಾರಂಭ ಸೋಮವಾರ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದ ಕಾಲೇಜು ಮೈದಾನದಲ್ಲಿ ನಡೆಯಿತು.
ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧಮಾರ್ಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಮುಖ್ಯ ಅಭಿಷೇಕದ ವಿಧಿವಿಧಾನ ನೆರವೇರಿಸಿದರು. ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾಧಮಾರ್ಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿದ್ದರು. ಈ ಸಂದರ್ಭದಲ್ಲಿ ಪೋಪ್ ಅವರ ಅಧಿಕೃತ ನೇಮಕಾತಿ ಪತ್ರವನ್ನು ವಾಚಿಸಲಾಯಿತು. ನೂತನ ಧಮಾರ್ಧ್ಯಕ್ಷರ ಶಿರವನ್ನು ಪವಿತ್ರ ತೈಲದಲ್ಲಿ ಅಭಿಷಿಕ್ತಗೊಳಿಸಿದ ಬಳಿಕ ಪವಿತ್ರ ಬೈಬಲ್ ಶಿರದ ಮೇಲಿರಿಸಿ ಪ್ರಾರ್ಥಿಸಲಾಯಿತು. ಬಳಿಕ ಅಧಿಕಾರದ ಉಂಗುರ ಧಾರಣೆ, ಶಿರವಸ್ತ್ರ ದಂಡವನ್ನು ಹಸ್ತಾಂತರಿಸಿ ಅಧಿಕೃತ ಪೀಠದಲ್ಲಿ ಕುಳ್ಳಿರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಸ್ಟೀವನ್ ಡಿಸೋಜಾ ಪವಿತ್ರ ಕ್ಯಾಥೋಲಿಕ್ ಚರ್ಚ್ ಹೋಲಿ ಫಾದರ್ ಅಧಿಕೃತ ಪತ್ರವನ್ನು ವಾಚಿಸಿದರು.
ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧಮಾರ್ಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ, 30ಕ್ಕೂ ಹೆಚ್ಚು ಧಮಾರ್ಧ್ಯಕ್ಷರು, 300 ಧರ್ಮಗುರುಗಳು, ಧರ್ಮಭಗಿನಿಯರು ಸೇರಿದಂತೆ ಸುಮಾರು 6,000ಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧಮಾರ್ಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಧರ್ಮಪ್ರಾಂತ್ಯಕ್ಕೆ ನೀಡಿದ ಸೇವೆಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ರಘುಪತಿ ಭಟ್, ಜೆ.ಆರ್. ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಕೆಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.
ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ರೋಶನ್ ಡಿಸೋಜಾ ವಂದಿಸಿದರು. ವಿಲ್ಸನ್ ಡಿಸೋಜಾ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮದ ನಿರ್ವಹಣೆ ಮಾಡಿದರು, ಡೆನಿಸ್ ಡೆಸಾ ಸಭಾ ಕಾರ್ಯಕ್ರಮ ನಿರ್ವಹಿಸಿದರು.