ಉಡುಪಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೀಹೋಲ್ ಮತ್ತು ರೋಬಾಟಿಕ್ ತಂತ್ರಜ್ಞಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವಿಧಾನ.
* ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಾಧನೆ
* ಕೀಹೋಲ್, ರೋಬಾಟಿಕ್ ತಂತ್ರಜ್ಞಾನ ಬಳಕೆ
ಉಡುಪಿ: ಉದರ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಸಂಕೀರ್ಣ ಚಿಕಿತ್ಸೆಯಾಗಿರುವ ಮೇದೋಜೀರಕ ಗ್ರಂಥಿಯಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಕೀಹೋಲ್ ಮತ್ತು ಅತ್ಯಾಧುನಿಕ ರೋಬಾಟಿಕ್ ತಂತ್ರಜ್ಞಾನದಿಂದ ತೆಗೆದುಹಾಕಿದ್ದಾರೆ.
ವೈದ್ಯರ ತಂಡದ ಯಶಸ್ವಿ ಚಿಕಿತ್ಸೆಯಿಂದ 58 ವರ್ಷದ ಮಹಿಳೆಯೊಬ್ಬರ ಜೀವ ಉಳಿದಿದ್ದು, ಕೇವಲ ಏಳು ದಿನಗಳಲ್ಲಿ ಅವರು ಚೇತರಿಸಿಕೊಂಡಿದ್ದಾರೆ.
ಕ್ಲಿಷ್ಟಕರ ಪ್ರಕರಣ
ರೋಗಿಯು ಕಣ್ಣು ಮತ್ತು ಚರ್ಮ ಹಳದಿಯಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದರು. ಇದು ಕ್ಯಾನ್ಸರ್ ಗಡ್ಡೆಯು ಯಕೃತ್ತಿನಿಂದ ಪಿತ್ತರಸದ ಹರಿವು ತಡೆದಾಗ ಉಂಟಾಗುವ ಪ್ರತಿರೋಧಕ ಕಾಮಾಲೆಯ ಲಕ್ಷಣ. ಸ್ಕ್ಯಾನ್ ಮಾಡಿದಾಗ ಪಿತ್ತರಸ ಮತ್ತು ಮೇದೋಜೀರಕ ನಾಳಗಳು ಸಣ್ಣ ಕರುಳಿಗೆ ತೆರೆದುಕೊಳ್ಳುವ ಸ್ಥಳದಲ್ಲಿ ಪೆರಿಆಂಪುಲರಿ ಗಡ್ಡೆ ಬೆಳೆದಿರುವುದು ಕಂಡುಬಂತು. ಅದು ಕರುಳಿನ ಗೋಡೆ ಮತ್ತು ಮೇದೋಜೀರಕ ಗ್ರಂಥಿಯ ತಲೆಗೆ ಹರಡಿತ್ತು. ರೋಗಿಯ ಶರೀರ ರಚನೆಯಲ್ಲಿನ ಅಸ್ವಾಭಾವಿಕ ವೈಶಿಷ್ಟ್ಯದಿಂದ ಈ ಪ್ರಕರಣ ಇನ್ನಷ್ಟು ಕಷ್ಟಕರವಾಗಿತ್ತು.
ಈ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ವೈದ್ಯರ ತಂಡವು 'ವಿಪಲ್ಸ್ ಶಸ್ತ್ರಚಿಕಿತ್ಸೆ' ಎಂದೇ ಪ್ರಚಲಿತದಲ್ಲಿರುವ ಪ್ಯಾಂಕ್ರಿಯಾಟಿಕೊಡ್ಯುಡೆನೆಕ್ಟಮಿ ನಡೆಸಿತು. ಇದರಲ್ಲಿ ಮೇದೋಜೀರಕ ಗ್ರಂಥಿಯ ತಲೆ, ಸಣ್ಣ ಕರುಳಿನ ಒಂದು ಭಾಗ, ಪಿತ್ತರಸ ನಾಳ ಮತ್ತು ಪಿತ್ತಕೋಶ ತೆಗೆದುಹಾಕಿ, ನಂತರ ಆಹಾರ ಮತ್ತು ಜೀರ್ಣರಸಗಳು ಮತ್ತೆ ಸಾಮಾನ್ಯವಾಗಿ ಹರಿಯುವಂತೆ ಜೀರ್ಣಾಂಗವನ್ನು ಜಾಗರೂಕತೆಯಿಂದ ಮತ್ತೆ ಜೋಡಿಸಲಾಗುತ್ತದೆ. ಇದರಿಂದ ರೋಗಿಗೆ ದೊಡ್ಡ ಪ್ರಮಾಣದ ಗಾಯವಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ತೆರೆದ ಶಸ್ತ್ರ ಚಿಕಿತ್ಸೆಯ ಬದಲಾಗಿ ಗಡ್ಡೆಯನ್ನು ಸಣ್ಣ ಕೀಹೋಲ್ ಛೇದದ ಮೂಲಕ ತೆಗೆದುಹಾಕಿದರು. ಇದಕ್ಕೆ HUGO RAS ಎಂಬ ರೋಬಾಟಿಕ್ ವ್ಯವಸ್ಥೆ ಬಳಸಲಾಗಿತ್ತು.
ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಪ್ರೀತಿ ಎಸ್. ಶೆಟ್ಟಿ, ಡಾ. ಅಖಿಲ್ ಪಾಲೋಡ್, ಡಾ. ಅನಂತಕೃಷ್ಣನ್ ಬಾಲಕೃಷ್ಣನ್, ಅರಿವಳಿಕೆ ತಜ್ಞರು ಹಾಗೂ ಓಟಿ ಸಿಬ್ಬಂದಿ ಸಹಕರಿಸಿದರು.
ಇಂತಹ ಪ್ರಕರಣ ತಾಂತ್ರಿಕವಾಗಿ ಬಹಳ ಸವಾಲಿನಿಂದ ಕೂಡಿರುತ್ತವೆ. ಕೀಹೋಲ್ ಮೂಲಕ ಗಡ್ಡೆ ತೆಗೆಯಲು ರೋಬಾಟಿಕ್ ಪುನರ್ ರಚನೆಯೊಂದಿಗೆ ಸಂಯೋಜಿಸಿ ಯಶಸ್ವಿಯಾಗಿ ಹಾಗೂ ಸುರತವಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲಾಯಿತು. ಸುಮಾರು ಎಂಟು ಗಂಟೆಗಳ ಕಾಲ ಆಪರೇಷನ್ ನಡೆದಿದ್ದು, ಕೇವಲ 200 ಮಿ.ಲೀ. ರಕ್ತಸ್ರಾವವಾಗಿದೆ. ರೋಗಿಗೆ ದೊಡ್ಡ ಗಾಯವೂ ಆಗಿಲ್ಲ.
ಮಣಿಪಾಲದಲ್ಲಿಯೂ ಸಹ ಅತ್ಯುತ್ತಮ ವೈದ್ಯಕೀಯ ತಂತ್ರಜ್ಞಾನ ಮತ್ತು ಮೂಲಸೌಕರ್ಯ ತರುವುದೇ ನಮ್ಮ ಗುರಿಯಾಗಿದೆ. ಅದರಿಂದ ಇಲ್ಲಿನ ರೋಗಿಗಳು ದೂರದ ನಗರಗಳಿಗೆ ತೆರಳುವುದು ತಪ್ಪಲಿದೆ. ಜಗತ್ತಿನ ಯಾವುದೇ ಶ್ರೇಷ್ಠ ಕೇಂದ್ರಗಳಲ್ಲಿ ಲಭ್ಯವಿರುವ ಅದೇ ಗುಣಮಟ್ಟದ ಆರೈಕೆಯನ್ನು ಕೆಎಂಸಿ ಮಣಿಪಾಲದಲ್ಲೂ ಪಡೆಯಬಹುದಾಗಿದೆ. ಅದಕ್ಕೆ ಈ ಶಸ್ತ್ರಚಿಕಿತ್ಸೆಯೇ ನಿದರ್ಶನವಾಗಿದೆ.