'ವರ್ಲ್ಡ್ ಗ್ರೀನೆಸ್ಟ್ ಹಾಸ್ಪಿಟಲ್ಸ್' ಶ್ರೇಯಾಂಕ ಗಳಿಸಿದ ಉಡುಪಿಯಲ್ಲಿರುವ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ.
* ನ್ಯೂಸ್ ವೀಕ್-2026ರ ಶ್ರೇಯಾಂಕ
* '4-ಎಲೆ'ಗಳ ರೇಟಿಂಗ್ ಸಾಧನೆ
ಉಡುಪಿ: ಉಡುಪಿಯಲ್ಲಿರುವ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಪರಿಸರ ಸುಸ್ಥಿರತೆಯಲ್ಲಿ ವಿಶ್ವದ ಅಗ್ರ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ಜಾಗತಿಕ ಸಂಶೋಧನೆ ಮತ್ತು ದತ್ತಾಂಶ ಸಂಸ್ಥೆಯಾದ ಸ್ಟಾಟಿಸ್ಟಾ ಸಹಯೋಗದೊಂದಿಗೆ ನ್ಯೂಸ್ ವೀಕ್ ಪ್ರಕಟಿಸಿರುವ 'ವರ್ಲ್ಡ್ ಗ್ರೀನೆಸ್ಟ್ ಹಾಸ್ಪಿಟಲ್ಸ್ 2026'ರ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪತ್ರೆಯು '4-ಎಲೆ'ಗಳ ರೇಟಿಂಗ್ ಗಳಿಸಿದೆ.
36 ದೇಶಗಳ 4 ಸಾವಿರಕ್ಕೂ ಅಧಿಕ ಅಧಿಕ ಆಸ್ಪತ್ರೆಗಳ ಮೌಲ್ಯಮಾಪನ ಮಾಡಲಾಗಿದ್ದು, ವಿಶ್ವಾದ್ಯಂತ 259 ಆರೋಗ್ಯ ಸಂಸ್ಥೆಗಳು ಈ ಶ್ರೇಯಾಂಕ ಗಳಿಸಿದೆ. ಏಷ್ಯಾ-ಪ್ಯಾಸಿಫಿಕ್ ಪ್ರದೇಶದ ಕೇವಲ 46 ಆಸ್ಪತ್ರೆಗಳು ಹಾಗೂ ಭಾರತದಲ್ಲಿನ 9 ಆಸ್ಪತ್ರೆ ಮಾತ್ರ ಸ್ಥಾನ ಗಳಿಸಿದೆ. ಇದರಲ್ಲಿ ಸಿಎಸ್ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯೂ ಇರುವುದು ಮಹತ್ತರ ಸಾಧನೆಯಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತನ್ನಾ ತಿಳಿಸಿದ್ದಾರೆ.
ಲೊಂಬಾರ್ಡ್ ಆಸ್ಪತ್ರೆಯು ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳಿಗಾಗಿ 2026ರ ಹೆಲ್ಪ್ ಸುಸ್ಥಿರತಾ ಶ್ರೇಷ್ಠತಾ ಪ್ರಶಸ್ತಿ ಗಳಿಸಿದ್ದು, ಅದರ ಬೆನ್ನಲ್ಲೇ ಈ ಮನ್ನಣೆ ಲಭಿಸಿರುವುದು ಸುಸ್ಥಿರ ಆರೋಗ್ಯ ಸೇವೆಯಲ್ಲಿ ಆಸ್ಪತ್ರೆಯ ಪ್ರಯತ್ನಗಳಿಗೆ ಮತ್ತಷ್ಟು ಬೆಂಬಲ ಲಭಿಸಿದಂತಾಗಿದೆ.
ಇನ್ಸ್ಪೈರ್ ಹಸಿರು ಯೋಜನೆ
ಉಡುಪಿಯ ಮಿಷನ್ ಆಸ್ಪತ್ರೆಯು 1923ರಲ್ಲಿ ಸ್ವಿಸ್ ಮೂಲದ ಮಿಷನರಿ ವೈದ್ಯೆ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿದ್ದು, ಶತಮಾನ ಪೂರೈಸಿರುವ ಕರಾವಳಿ ಕರ್ನಾಟಕದ ಮುಂಚೂಣಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಸೇವೆ ಒದಗಿಸುವವರ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯ ಅನುಮತಿಯನ್ನೂ ಹೊಂದಿದೆ. ಆಸ್ಪತ್ರೆಯ ನಿರ್ದೇಶಕ ಡಾ. ಸುಶಿಲ್ ಜತನ್ನಾ ನೇತೃತ್ವದಲ್ಲಿ 2024ರಲ್ಲಿ 'ಇನ್ಸ್ಪೈರ್ ಹಸಿರು ಆಸ್ಪತ್ರೆ ಯೋಜನೆ' ಆರಂಭಿಸಿದ್ದು, ಪರಿಸರಸ್ನೇಹಿ ಉಪಕ್ರಮ ಅಳವಡಿಸಲಾಗಿದೆ. ಸೌರ ವಿದ್ಯುತ್ ವ್ಯವಸ್ಥೆ, ಕಾರ್ಬನ್ ಮೌಲ್ಯಮಾಪನ, ಇಂಧನ ಹಾಗೂ ನೀರಿನ ಸಂರಕ್ಷಣಾ ಕ್ರಮ, ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜನ ನೀಡಲಾಗಿದೆ. ಹವಾಮಾನ ಬದಲಾವಣೆ ಹಾಗೂ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಡುಪಿಯಂತಹ ದ್ವಿತೀಯ ಶ್ರೇಣಿಯ ಪಟ್ಟಣ (ಟೈರ್-2)ದಲ್ಲಿ ಸೇವೆ ಸಲ್ಲಿಸುತ್ತಿರುವ ಲೊಂಬಾರ್ಡ್ ಆಸ್ಪತ್ರೆ ಈ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಸ್ಥಳೀಯ ಮಟ್ಟದ ಈ ಹಸಿರೀಕರಣದ ಪ್ರಯತ್ನ ಅಂತಾರಾಷ್ಟ್ರೀಯ ಗೌರವ ತಂದುಕೊಡಬಲ್ಲದು ಎನ್ನುವುದಕ್ಕೆ ಈ ಮನ್ನಣೆ ಸಾ. ಮಿಷನ್ ಆಸ್ಪತ್ರೆಯಲ್ಲಿ ಇನ್ಸ್ಪೈರ್ ಯೋಜನೆಯ ಅನುಷ್ಠಾನದಲ್ಲಿ ತಳಮಟ್ಟದಲ್ಲಿ ಶ್ರಮಿಸಿದ ಸಿಬ್ಬಂದಿ, ವಿದ್ಯಾರ್ಥಿಗಳ ಕೊಡುಗೆ ಅನನ್ಯ. ಲೊಂಬಾರ್ಡ್ ಪ್ರತಿಷ್ಠಾನ ಹಾಗೂ ಸಲಹೆಗಾರರು ನೀಡಿದ ಸಹಕಾರ ಸ್ಮರಣೀಯ. ಆರೋಗ್ಯ ಸೇವೆಯೊಂದಿಗೆ ಪರಿಸರದ ರಕ್ಷಣೆಯ ಜವಾಬ್ದಾರಿ ನಿರಂತರ ನಡೆಯಲಿದೆ.