ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣಕ್ಕೆ ಭೇಟಿ ನೀಡಿದ ಡಾ. ರಂಜನ್ ಆರ್. ಪೈ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಾ. ಎಚ್. ಎಸ್. ಬಲ್ಲಾಳ, ಎಂ. ಗಂಗಾಧರ್ ರಾವ್, ಮುರಳಿ ಕಡೆಕಾರ್, ಕೆ. ಗಣೇಶ್ ರಾವ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್, ನಾರಾಯಣ ಎಂ. ಹೆಗಡೆ ಇತರರಿದ್ದರು.
* ಸಂಸ್ಥೆಯ ಅಧ್ಯಕ್ಷ ಡಾ. ರಂಜನ್ ಆರ್. ಪೈ ಘೋಷಣೆ
* ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯಕ್ಕೆ ಶ್ಲಾಘನೆ
ಉಡುಪಿ: ಯಕ್ಷಗಾನ ಕಲಾರಂಗ ಸಂಸ್ಥೆಯು ಯಾವುದೇ ಆಡಂಬರವಿಲ್ಲದೆ ಸಮಾಜಸೇವೆಯಲ್ಲೂ ನಿರತವಾಗಿದೆ. ಮನೆಯಿಲ್ಲದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ಯೋಜನೆಯಡಿ ದಾನಿಗಳ ಸಹಕಾರದಲ್ಲಿ ಮನೆ ನಿರ್ಮಿಸಿ ಕೊಡುತ್ತಿರುವ ಕಾರ್ಯ ಶ್ಲಾಘನೀಯ. ಅವರ ಕಾರ್ಯಕ್ಕೆ ಪ್ರೋತ್ಸಾಹದಾಯಕವಾಗಿ ಮಾಹೆ ವತಿಯಿಂದ ಪ್ರತಿವರ್ಷ 10 ಮನೆಗಳಂತೆ 50 ಮನೆಗಳ ಪ್ರಾಯೋಜಕತ್ವ ವಹಿಸುವುದಾಗಿ ಮಾಹೆ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ರಂಜನ್ ಆರ್. ಪೈ ಘೋಷಿಸಿದರು.
ಉಡುಪಿಯ ಕುಂಜಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣಕ್ಕೆ ಮಂಗಳವಾರ (ಜೂ.16) ಭೇಟಿ ನೀಡಿ ಇಡೀ ಕಟ್ಟಡ ವೀಕ್ಷಿಸಿದರು. ಸಭಾಭವನದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರ ವೀಸಿ, ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಡಾ. ಟಿ. ಎಂ.ಎ. ಪೈ ಅವರಿಂದ ಆರಂಭಗೊಂಡ ಮಣಿಪಾಲ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಡಾ. ರಾಮದಾಸ್ ಪೈ ಅವರಿಂದ ಅಭಿವೃದ್ಧಿ ಹೊಂದಿತು. ಡಾ. ರಂಜನ್ ಪೈ ಅವಧಿಯಲ್ಲಿ ಜಾಗತಿಕವಾಗಿ ವಿಸ್ತರಿಸಿಕೊಂಡಿವೆ. ಅವರ ಕರ್ತೃತ್ವ ಶಕ್ತಿ, ಸರಳತೆ, ಔದಾರ್ಯ ನಮಗೆಲ್ಲ ಮಾದರಿಯಾಗಿದೆ ಎಂದರು. ಐವೈಸಿ ಕಟ್ಟಡದಲ್ಲಿ ಇನ್ನೂ ಆಗಬೇಕಾಗಿರುವ ಕಾಮಗಾರಿಯ ಕುರಿತು ಸಭೆಯ ಗಮನಕ್ಕೆ ತಂದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿ, ಡಾ. ರಂಜನ್ ಪೈ ಅವರು ಸಂಸ್ಥೆಗೆ ಜಾಗ ಖರೀದಿಸಲು ಮತ್ತು ಕಟ್ಟಡ ನಿರ್ವಹಣೆಗೆ ಈಗಾಗಲೇ ನೀಡಿದ ಉದಾರ ಆರ್ಥಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್, ಸಹಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ಪ್ರೊ. ಎಂ.ಎಲ್. ಸಾಮಗ, ಭುವನ ಪ್ರಸಾದ್ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಪ್ರೊ. ಶಂಕರ್, ಅನಂತರಾಜ ಉಪಾಧ್ಯ, ಡಾ. ರಾಜೇಶ್ ನಾವುಡ, ಗಣೇಶ್ ಬ್ರಹ್ಮಾವರ, ಕುಮಾರಿ ಸಂಸ್ಕೃತಿ ಉಪಸ್ಥಿತರಿದ್ದರು.
ಆರೋಗ್ಯ ಕ್ಷೇತ್ರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಹೆ ನಿರಂತರ ಆರ್ಥಿಕ ನೆರವು ನೀಡುತ್ತ ಬಂದಿದೆ. ಯಕ್ಷಗಾನ ಕಲಾರಂಗ ಕೇವಲ ಕಲೆಯ ಅಭಿವದ್ಧಿಗೆ ಸೀಮಿತವಾಗಿರದೆ ಸಾಮಾಜಿಕ ಸೇವೆಯನ್ನೂ ಮಾಡುತ್ತಿರುವುದು ವಿಶೇಷ. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮಾಹೆ ಸದಾ ಬೆಂಬಲವಾಗಿ ನಿಲ್ಲುತ್ತದೆ.
— ಡಾ. ಎಚ್. ಎಸ್. ಬಲ್ಲಾಳ. ಮಾಹೆ ಸಹಕುಲಾಧಿಪತಿ.