ಉಡುಪಿ ಯಕ್ಷಗಾನ ಕಲಾರಂಗದಿಂದ ಹೊನ್ನಾವರದ ಕಲಾವಿದ ಕಾಸರಕೋಡು ಶ್ರೀಧರ್​ ಭಟ್​ ಅವರ ಪತ್ನಿಗೆ ಎಂ.ಗಂಗಾಧರ್​ ರಾವ್​ ಅವರು ಸಾಂತ್ವನ ನಿಧಿ ಅರ್ಪಿಸಿದರು. ಮುರಳಿ ಕಡೆಕಾರ್​, ನಾರಾಯಣ ಎಂ. ಹೆಗಡೆ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ನೀಲ್ಕೋಡು ಶಂಕರ್​ ಹೆಗಡೆ ಇದ್ದರು. 
ಉಡುಪಿ

ಮರೆಯಲಾಗದ ಹಾಸ್ಯ ಕಲಾವಿದ ಶ್ರೀಧರ್​ ಭಟ್​

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್​ ಅಭಿಪ್ರಾಯ

* ಕುಟುಂಬಕ್ಕೆ ಕಲಾರಂಗದಿಂದ ಸಾಂತ್ವನ ನಿಧಿ ಅರ್ಪಣೆ

ಉಡುಪಿ: ಯಕ್ಷಗಾನ ಕಲೆಯಲ್ಲಿ ಪ್ರಧಾನ ಪಾತ್ರಧಾರಿಗಳಷ್ಟೇ ಹಾಸ್ಯ ಕಲಾವಿದರ ಕೊಡುಗೆಯೂ ಮಹತ್ವದ್ದಾಗಿರುತ್ತದೆ. ತನ್ನ ಹಾವ-ಭಾವ, ಉತ್ತಮ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಕಾಸರಕೋಡು ಶ್ರೀಧರ್​ ಭಟ್​ ಅವರನ್ನು ಮರೆಯಲಾಗದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್​ ರಾವ್​ ಹೇಳಿದರು.
ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದ ಹೊನ್ನಾವರದ ಕಾಸರಕೋಡು ಶ್ರೀಧರ್​ ಭಟ್​ ಅವರ ಮನೆಗೆ ಕಲಾರಂಗದ ಪದಾಧಿಕಾರಿಗಳೊಂದಿಗೆ ಶುಕ್ರವಾರ (ಸೆ.11) ಭೇಟಿ ನೀಡಿ, ಸಂಸ್ಥೆಯ ವತಿಯಿಂದ 50 ಸಾವಿರ ರೂ. ಸಾಂತ್ವನ ನಿಧಿ ಅರ್ಪಿಸಿ ಮಾತನಾಡಿದರು. 
ಮೃತರ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಲಾಯಿತು. ಯಜಮಾನರು ಅನಾರೋಗ್ಯದಲ್ಲಿದ್ದಾಗ ಅವರನ್ನು ಉಡುಪಿಯ ಎ.ವಿ. ಬಾಳಿಗಾ ಆಸ್ಪತ್ರೆಗೆ ಸೇರಿಸಿ ಗಂಗಾಧರ್​ ಅವರು ವೈಯಕ್ತಿಕವಾಗಿ ದೊಡ್ಡ ಮೊತ್ತ ಭರಿಸಿದ್ದರು. ಅವರ ಉಪಕಾರ ಮರೆಯಲಾರೆ ಎಂದು ಪತ್ನಿ ಮಂಜುಳಾ ಶ್ರೀಧರ್​ ಭಟ್​ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್​, ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಕಲಾವಿದ ನೀಲ್ಕೋಡು ಶಂಕರ್​ ಹೆಗಡೆ ಇದ್ದರು.