ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ವಿಜಯೇಂದ್ರ ವಿ. ರಾವ್ ಮಾತನಾಡಿದರು. ಅಮ್ಮುಂಜೆ ಪ್ರಭಾಕರ್ ನಾಯಕ್, ಭಗವಾನ್ ದಾಸ್, ಯೋಗೀಶ್ಚಂದ್ರ ದಾರ, ಅಮಿತ್ ಅರವಿಂದ್ ಇದ್ದರು.
* ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ಮಾಹಿತಿ
* ಜು.12ರಂದು ಕಿದಿಯೂರು ಹೋಟೆಲ್ನಲ್ಲಿ ಸಭೆ
* ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಆಯೋಜನೆ
ಉಡುಪಿ: ಸಾಧನೆಗಳ ಮಾತಿಲ್ಲದ, ಆರೋಪ-ನಿಂದನೆಗಳಿಲ್ಲದ ಹಾಗೂ ಆಸೆ, ಕನಸುಗಳ ಬೆನ್ನುಹತ್ತಿ ಜಗತ್ತು ಉಡುಪಿಯತ್ತ ಹೆಮ್ಮೆಯಿಂದ ನೋಡುವ ಛಲ, ಗುರಿ ಮತ್ತು ಸಂಕಲ್ಪದೊಂದಿಗೆ ಜು.12ರಂದು ಸಂಜೆ 5 ಗಂಟೆಗೆ ಕಿದಿಯೂರು ಹೋಟೆಲ್ನ ಶೇಷಶಯನ ಹಾಲ್ನಲ್ಲಿ 'ಉಡುಪಿ ವಿಷನ್ 20-30-35' ಎಂಬ ಚಿಂಥನ-ಮಂಥನ ಸಭೆ ಆಯೋಜಿಸಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಯ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜು.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೃದ್ಧ, ಸುಸ್ಥಿರ ಹಾಗೂ ಆದರ್ಶ ಉಡುಪಿ ನಿರ್ಮಾಣದ ಉದ್ದೇಶವೇ ಈ ಚಿಂಥನ-ಮಂಥನದ ಉದ್ದೇಶವಾಗಿದೆ ಎಂದರು.
ದೃಷ್ಟಿ-ಧ್ಯೇಯ
2035ರ ವೇಳೆಗೆ ಉಡುಪಿ ಜಿಲ್ಲೆಯನ್ನು ಭಾರತದ ಅತ್ಯುತ್ತಮ, ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಹೂಡಿಕೆಗೆ ಆಕರ್ಷಿಸುವ, ಸುರತ, ಸಾಂಸ್ಕೃತಿಕವಾಗಿ ಶ್ರೀಮಂತ ಹಾಗೂ ಜೀವನ ಮಟ್ಟದಲ್ಲಿ ಮಾದರಿ ಜಿಲ್ಲೆಯಾಗಿಸುವುದು ನಮ್ಮ ದೂರದೃಷ್ಟಿಯಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಪಾಲುದಾರರನ್ನು ಒಂದೇ ವೇದಿಕೆಗೆ ತಂದು ಮುಂದಿನ 10 ವರ್ಷದಲ್ಲಿ ಸಮಗ್ರ ಅಭಿವೃದ್ಧಿಗೆ ಕಾರ್ಯ ಸಾಧ್ಯವಾದ ನೀಲಿನಕ್ಷೆ ರೂಪಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ಅಭಿವೃದ್ಧಿಯ ಚಳವಳಿ
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿಜಯೇಂದ್ರ ವಿ. ರಾವ್ ಮಾತನಾಡಿ, ನಾವು ಕೇವಲ ಅಭಿವೃದ್ಧಿಯ ಕನಸು ಕಾಣುವುದಿಲ್ಲ. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್, ಕ್ರೆಡೈ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯ ಉಡುಪಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ 'ಉಡುಪಿ ವಿಷನ್ 20-30-35' ಎಂಬ ಚಳವಳಿ ಆರಂಭಿಸಲಿದ್ದೇವೆ. ಅವುಗಳನ್ನು ಕಾರ್ಯರೂಪಕ್ಕೆ ತಂದು ಮುಂದಿನ ಪೀಳಿಗೆಗೆ ಶಾಶ್ವತ ಪರಂಪರೆಯಾಗಿ ನೀಡುತ್ತೇವೆ ಎಂದರು.
ಸಮನ್ವಯಕರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ಡಾ. ಪಿ.ಎ. ಆಚಾರ್, ಡಾ. ಶಿವಾನಂದ್ ನಾಯಕ್, ಸುರೇಂದ್ರ ನಾಯಕ್, ಪ್ರಸಾದ್ ಉಪಾಧ್ಯ, ಕಿರಣಕುಮಾರ್ ಪಾಳ್ಗೊಳ್ಳಲಿದ್ದಾರೆ. ಇಂದಿನ ಚಿಂತನೆ ನಾಳಿನ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸಿಸಿಇಎ ಅಧ್ಯಕ್ಷ ಭಗವಾನ್ ದಾಸ್, ಮಾಜಿ ಅಧ್ಯಕ್ಷ ಯೋಗೀಶ್ಚಂದ್ರ ದಾರ, ಕ್ರೆಡೈನ ಜನರಲ್ ಸೆಕ್ರೆಟರಿ ಅಮಿತ್ ಅರವಿಂದ್, ಎಸಿಸಿಇಎ ಇಂಜಿನಿಯರ್ ನಿಶ್ಚಲ್ ಜಾನ್ ಇದ್ದರು.
ಎಲ್ಲ ಕ್ಷೇತ್ರಗಳ ಪ್ರಮುಖರು ಭಾಗಿ
ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ವಿ.ಪ. ಸದಸ್ಯರು, ಕರಾವಳಿ ಅಭಿವೃದ್ಧಿ ಮಂಡಳಿಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಸಚಿವರು-ಸಂಸದರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ, ವಿವಿಧ ಪಕ್ಷಗಳ ಮುಖಂಡರು, ಸರ್ಕಾರಿ ಆಡಳಿತಾಧಿಕಾರಿಗಳು, ವಿವಿಧ ಇಲಾಖೆಯ ಪರಿಣರು, ವಾಸ್ತುಶಿಲ್ಪಿಗಳು,ಇಂಜಿನಿಯರ್ಸ್, ಉದ್ಯಮಿಗಳು, ಶಿಕ್ಷಣ ತಜ್ಞರು, ವೈದ್ಯರು, ಪರಿಸರವಾದಿಗಳು, ಯುವಜನರು, ಮಹಿಳಾ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರೂ ಸಹ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ತಾವೇನು ಮಾಡಬಹುದು ಎಂಬ ಕುರಿತು ದಾಖಲೆ ಸಮೇತ ಮಾತನಾಡಲಿದ್ದಾರೆ. ಅಲ್ಲದೆ, ಪೂರಕ ಮಾಹಿತಿಯನ್ನೂ ಒದಗಿಸಲಿದ್ದಾರೆ.