ಉಡುಪಿಯಲ್ಲಿ ಸಸ್ಯಸಂತೆ ಉದ್ಘಾಟಿಸಿದ ದಿನಕರ್ ಹೇರೂರು ವಿವಿಧ ಗಿಡಗಳನ್ನು ವೀಸಿದರು. ಕ್ಷಮಾ ಪಾಟೀಲ, ಹೇಮಂತ್ ಎಲ್., ಸುನೀಲ್ ವೈ.ಎಚ್, ವರುಣ್ ಕೆ.ಜೆ, ನಿಧೀಶ್ ಕೆ.ಜೆ., ಮಂಜುನಾಥ್ ಬಿ. ಇದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಮೂರು ದಿನಗಳ ಸಂಸ್ಯಸಂತೆ ಉದ್ಘಾಟನೆ
ಉಡುಪಿ: ರೈತರು ಹಾಗೂ ಜನಸಾಮಾನ್ಯರು ಗಿಡಗಳ ಪೋಷಣೆಗೆ ರಾಸಾಯನಿಕ ಬಳಸದೆ ಸಾವಯವ ಗೊಬ್ಬರ ಬಳಸಿ ಬೆಳೆಸಿದಾಗ ಗುಣಮಟ್ಟದ ಹಣ್ಣು-ಹಂಪಲು ಪಡೆಯಲು ಸಾಧ್ಯ. ಅದು ಆರೋಗ್ಯಕ್ಕೂ ಪೂರಕ. ಸಸ್ಯಗಳು ನಮ್ಮೆಲ್ಲರ ಬದುಕಿನ ಜೀವನಾಡಿಯಾಗಿದ್ದು, ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಸಲಹೆ ನೀಡಿದರು.
ಉಡುಪಿಯ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಾರ್ವಜನಿಕರು ಹಾಗೂ ರೈತರಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಮೂರು ದಿನಗಳ 'ಸಸ್ಯ ಸಂತೆ-' ಕಾರ್ಯಕ್ರಮವನ್ನು ಶುಕ್ರವಾರ (ಆ.14) ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ ಮಾತನಾಡಿ, ಸಸ್ಯಸಂತೆಯಲ್ಲಿ ಲಭ್ಯವಿರುವ ಗಿಡಗಳಿಂದ ನಗರ ಪ್ರದೇಶಗಳಲ್ಲಿ ಮನೆಯ ಸುತ್ತಮುತ್ತಲೂ ಕೈತೋಟ ಬೆಳೆಸಲು ಸಹಕಾರಿಯಾಗಲಿದೆ. ರೈತರಿಗೂ ಸಹ ತೋಟಗಾರಿಕೆಯ ಕೃಷಿ ಕೈಗೊಳ್ಳಲು ಸಸಿಗಳು, ಗೊಬ್ಬರ, ತೋಟಗಾರಿಕಾ ಸಲಕರಣೆಗಳು ಇಲ್ಲಿ ಲಭ್ಯವಿವೆ. ಇದರ ಲಾಭ ಪಡೆದುಕೊಳ್ಳಬಹುದು ಎಂದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಎಲ್., ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸುನೀಲ್ ವೈ.ಎಚ್, ವರುಣ್ ಕೆ.ಜೆ, ನಿಧೀಶ್ ಕೆ.ಜೆ., ವಾರ್ತಾಧಿಕಾರಿ ಮಂಜುನಾಥ್ ಬಿ. ಉಪಸ್ಥಿತರಿದ್ದರು.
ಗಮನ ಸೆಳೆಯುತ್ತಿದೆ ವಿವಿಧ ಮಳಿಗೆ
ಸಸ್ಯಸಂತೆಯಲ್ಲಿ ಎಲ್ಲ ಬಗೆಯ ಆಹಾರೋತ್ಪನ್ನ, ಚಿಯಾ ಸೀಡ್ಸ್, ರಾಗಿ ಖಾದ್ಯ, ಮಿಲೆಟ್ಸ್ ಪೌಡರ್ಸ್, ಮಡಿಕೇರಿ ಬಟರ್ ಫ್ರುಟ್ಸ್, ಹಲಸಿನ ಹಾಗೂ ಮಾವಿನಹಣ್ಣಿನ ವಿವಿಧ ತಳಿಗಳ ಮಳಿಗೆ ತೆರೆಯಲಾಗಿದೆ. ಹಣ್ಣಿನ ಗಿಡ, ತರಕಾರಿ, ಹೂವು, ಔಷಧ ಹಾಗೂ ವಿವಿಧ ಬಗೆಯ ಅಲಂಕಾರಿಕ ಗಿಡಗಳಿವೆ. ತೋಟಗಾರಿಕಾ ಸಲಕರಣೆಗಳು, ಗೊಬ್ಬರ ಇತ್ಯಾದಿ ಸಾಮಾಗ್ರಿಗಳು ಒಂದೇ ಸೂರಿನಡಿ ಲಭ್ಯವಿದೆ. ಆ.16ರ ವರೆಗೆ ಸಂಸ್ಯ ಸಂತೆ ಇರಲಿದೆ.