* ಉಡುಪಿ ತುಳುಕೂಟದಿಂದ ಆಯೋಜನೆ
* ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಸ್ಪರ್ಧೆ
ಉಡುಪಿ: ತುಳು ಬದುಕಿನ ವೈಶಿಷ್ಟ್ಯ ಪರಿಚಯಿಸುವ ಉದ್ದೇಶದಿಂದ ಉಡುಪಿ ತುಳುಕೂಟದ ಪ್ರಾಯೋಜಕತ್ವ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಜು.4ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ಬಡಗಬೆಟ್ಟು ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ 'ಮದೆರೆಂಗಿದ ರಂಗ್' ಕಾರ್ಯಕ್ರಮ ನಡೆಯಲಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸಾಂಪ್ರದಾಯಿಕ ಸ್ಪರ್ಧೆ ಆಯೋಜಿಸಲಾಗಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಎಲೆಯಿಂದ ಪೀಂಪಿರಿ ಊದುವ ಸ್ಪರ್ಧೆ, ಹಲಸಿನ ಬೀಜದ ಸಿಪ್ಪೆ ತೆಗೆಯುವ ಸ್ಪರ್ಧೆ, ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂಗೈಗೆ ಮದರಂಗಿ ಹಾಕುವ ಸ್ಪರ್ಧೆ, ತುಳುನಾಡಿನ ವಿವಿಧ ಹಣ್ಣುಗಳ ಪರಿಚಯ ಹೇಳುವ ಸ್ಪರ್ಧೆ, ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆ. ಕಾಲೇಜು ವಿದ್ಯಾರ್ಥಿಗಳಿಗೆ ಅಂಗೈಗೆ ಮದರಂಗಿ ಹಾಕುವ ಸ್ಪರ್ಧೆ, ಕೇಶಾಲಂಕಾರ ಸ್ಪರ್ಧೆ, ಮುಂಡಾಸು ಕಟ್ಟುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ. ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ತುಳು ರಸಪ್ರಶ್ನೆ ಹಾಗೂ ತುಳು ಲಿಪಿ ಬರೆಯುವ ಸ್ಪರ್ಧೆ ಕೂಡ ನಡೆಯಲಿದೆ.
ಸಾಂಪ್ರದಾಯಿಕ ಸ್ಪರ್ಧೆ ಆಗಿದ್ದರಿಂದ ಮದರಂಗಿ ಕೋನ್ ಬಳಸಲು ಅವಕಾಶವಿಲ್ಲ. ಮದರಂಗಿ ಸೊಪ್ಪು ನುರಿದು ತಂದು ಕಡ್ಡಿಯ ಸಹಾಯದಿಂದ ಅಂಗೈಯಲ್ಲಿ ವಿನ್ಯಾಸ ಬಿಡಿಸಬೇಕು. ಹೂ ಕಟ್ಟುವವರು ಹೂಗಳನ್ನು ತಾವೇ ತರಬೇಕು. ಮಾಹಿತಿಗಾಗಿ ಮೊ.ಸಂ. 9036483463, 8217687475 ಸಂಪರ್ಕಿಸಬಹುದು ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.