ತಾಲೂಕು ಮಟ್ಟದ ತೆಮಾಸಿಕ ಕೆ.ಡಿ.ಪಿ. ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ಉಡುಪಿ: ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಏಕ ನಿವೇಶನ ಮತ್ತು ಬಹು ನಿವೇಶನ ನಕ್ಷೆ ಅನುಮೋದನೆ ನೀಡುವಲ್ಲಿ ಕಡತಗಳನ್ನು ವಿಳಂಬ ಮಾಡಬಾರದು. ಪ್ರಸ್ತುತ 300 ಅರ್ಜಿಗಳು ಬಾಕಿ ಉಳಿದಿದ್ದು, ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ಮುಂದಿನ ಸಭೆಯಲ್ಲಿ ಪ್ರತಿ ಕಡತಗಳ ವಿವರ ಕೇಳಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ತಾ.ಪಂ.ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ತೆಮಾಸಿಕ ಕೆ.ಡಿ.ಪಿ. ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜನಸಾಮಾನ್ಯರ ಕೆಲಸಕಾರ್ಯಗಳು ಮಧ್ಯವರ್ತಿಗಳ ಮೂಲಕವೇ ಕೆಲಸಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಮಧ್ಯವರ್ತಿಗಳ ಮೂಲಕವೇ ಕಡತ ವಿಲೇವಾರಿಯಾಗುವುದಾರೆ ಅಧಿಕಾರಿಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಪ್ರಾಧಿಕಾರದಲ್ಲಿರುವ ಸಿಬಂದಿ ಕೊರತೆ ಸಹಿತ ಇತರ ಸಮಸ್ಯೆಗಳಿದ್ದರೆ ಪಟ್ಟಿಮಾಡಿ ನೀಡಬಹುದು. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಡೀಮ್ಡ್ ಫಾರೆಸ್ಟ್ ಗೊಂದಲ ಪರಿಹರಿಸಲು ಸೂಚನೆ
ಬಡ ಜನರು ನಿವೇಶನ ಕಟ್ಟಲು ಹಾಗೂ ಕೆಲವು ಸರ್ಕಾರಿ ಕಟ್ಟಡಗಳಿಗೂ ಡೀಮ್ಡ್ ಫಾರೆಸ್ಟ್ ನೆಪ ಒಡ್ಡಲಾಗುತ್ತಿದೆ. ಮಾರ್ಗಸೂಚಿ ಪ್ರಕಾರ 120 ಮರಗಳಿದ್ದರಷ್ಟೇ ಅದು ಡೀಮ್ಡ್ ಫಾರೆಸ್ಟ್ ಆಗಲಿದೆ. ಇದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಹೊರತು ಅನಗತ್ಯ ಗೊಂದಲ ಉಂಟುಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರಣ್ಯ ಮತ್ತು ಕಂದಾಯ ಇಲಾಖೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು. ಡೀಮ್ಡ್ ಫಾರೆಸ್ಟ್ ಇರುವ ಸ್ಥಳದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿ ಕಂದಾಯ ಭೂಮಿ ಹಸ್ತಾಂತರಿಸಲು ಕ್ರಮವಹಿಸಬೇಕು ಎಂದರು.
ಹೊಸ ರೇಶನ್ ಕಾರ್ಡ್ ಮಾಡಲು ಅವಕಾಶವಿಲ್ಲ. ಆದರೆ ತುರ್ತು ವೈದ್ಯಕಿಯ ನೆಲೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಬಾಕಿ ಇರುವ 22 ಫೈಲ್ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು.
ಕೃಷಿ, ತೋಟಗಾರಿಕೆ ಯೋಜನೆಗಳ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರತಿ ಪಂಚಾಯತ್ ಮಟ್ಟದಲ್ಲಿ ಕೈಪಿಡಿ ಮಾಡಿ ಜನರಿಗೆ ಇಲಾಖೆಯಲ್ಲಿರುವ ಸವಲತ್ತುಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಯಪಡಿಸಬೇಕು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿದ್ದು, ಕ್ರೀಡಾಪಟುಗಳಿಗೆ ಸೂಕ್ತ ನೆರವು ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿ ತಾ.ಪಂ.ಆಡಳಿತಾಧಿಕಾರಿ ರಶ್ಮಿ, ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಹಶೀಲ್ದಾರ್ ಗುರುರಾಜ್ ಉಪಸ್ಥಿತರಿದ್ದರು. ಮೂರು ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿಯನ್ನು ವಿತರಿಸಲಾಯಿತು. -