ಮಕ್ಕಳನ್ನು ಕದಿಯುವ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ಆಗುತ್ತಿರುವ ಪೋಸ್ಟ್​. 
ಉಡುಪಿ

ಮಕ್ಕಳ ಕಳ್ಳರ ವದಂತಿ ಸುಳ್ಳು ಸುದ್ದಿ

* ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್​ ಸ್ಪಷ್ಟನೆ

* ವೈರಲ್​ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ

ಉಡುಪಿ: ಮಕ್ಕಳನ್ನು ಕದಿಯುವ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಲಾಗುತ್ತಿದ್ದು, ಅದು ಸುಳ್ಳು ಸುದ್ದಿಯಾಗಿದೆ. ಯಾರೂ ಅದನ್ನು ನಂಬಬಾರದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ತಿಳಿಸಿದ್ದಾರೆ.
'ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪಾಲಕರು ಕಡ್ಡಾಯವಾಗಿ ಇರಲೇಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ದಯಮಾಡಿ ಎಲ್ಲ ಪಾಲಕರು ಗಮನಹರಿಸಿ' ಎಂಬ ಒಕ್ಕಣೆ ಇರುವ ಪೋಸ್ಟ್​ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ಇದು ನಕಲಿ ಸುದ್ದಿ ಆಗಿದ್ದು ಯಾರೂ ನಂಬಬಾರದು. ಅಲ್ಲದೆ, ಈ ಪೋಸ್ಟ್​ಅನ್ನು ಇನ್ನೊಬ್ಬರಿಗೆ ಅಥವಾ ಪರಿಚಿತ ಗುಂಪುಗಳಿಗೆ ಶೇರ್​ ಮಾಡಬಾರದು. ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹರಿರಾಂ ಶಂಕರ್​ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.