ಉಡುಪಿಯಿಂದ ಮಕ್ಕಳೊಂದಿಗೆ ತಮಿಳುನಾಡಿಗೆ ತೆರಳಿದ ಮಾಜಿ ಯೋಧ ಶಶಿಶೇಖರ್​ ಠಾಕೂರ್​. ವಿಶು ಶೆಟ್ಟಿ, ಉಡುಪಿಯ ನಿವೃತ್ತ ಯೋಧರು ಇದ್ದರು. 
ಉಡುಪಿ

ರಕ್ಷಿಸಲ್ಪಟ್ಟ ತಮಿಳುನಾಡು ನಿವೃತ್ತ ಯೋಧ ಮಕ್ಕಳಿಗೆ ಹಸ್ತಾಂತರ

* ಉಡುಪಿಯ ವಿಶು ಶೆಟ್ಟಿ, ಮಾಜಿ ಸೈನಿಕರು, ವೈದ್ಯರ ಸ್ಪಂದನೆ 

* ಕಾಪು ರೈಲ್ವೆ ಹಳಿಯ ಬಳಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೃದ್ಧ 

ಉಡುಪಿ: ಕಾಪು ತಾಲೂಕಿನ ಅಚ್ಚಡ ರೈಲ್ವೆ ಹಳಿಯ ಬಳಿ ಅರೆನಗ್ನ ಸ್ಥಿತಿಯಲ್ಲಿದ್ದ ಹಾಗೂ ಮರೆವು ಕಾಯಿಲೆಯಿಂದ ಬಳಲಿ ಅಸಹಾಯಕ ಸ್ಥಿತಿಯಲ್ಲಿದ್ದ ತಮಿಳುನಾಡು ಮೂಲದ ನಿವೃತ್ತ ಲೆಫ್ಟಿನೆಂಟ್​ ಕಮಾಂಡರ್​ ಶಶಿಶೇಖರ್​ ಠಾಕೂರ್​ ಅವರನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಕಾಪು ಠಾಣೆಯ ಪೊಲೀಸರ ಸಹಕಾರದಲ್ಲಿ ವಾರದ ಹಿಂದೆ ನಿವೃತ್ತ ಯೋಧನನ್ನು ರಕ್ಷಿಸಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಉಡುಪಿ ಮಾಜಿ ಸೈನಿಕರ ಸ್ಪಂದನೆ

ಈ ಮಾಹಿತಿ ತಿಳಿದ ಉಡುಪಿಯ ನಿವೃತ್ತ ಸೈನಿಕರಾದ ಕಮಾಂಡರ್​ ಸುದರ್ಶನ್​ ಪೈ ಹಾಗೂ ನೌಕಾ ಸೇನೆಯ ನಿವೃತ್ತ ಯೋಧ ಜಯಾನಂದ ಪೂಜಾರಿ ಆಸ್ಪತ್ರೆಗೆ ಆಗಮಿಸಿ, ಶಶಿಶೇಖರ್​ ಠಾಕೂರ್​ ಅವರ ಕಷ್ಟಕ್ಕೆ ಸ್ಪಂದಿಸಿದರು. ಅವರ ಇಸಿಆರ್​ಸಿ ಯೋಜನೆಯ ಪ್ರಬಂಧಕ ಸುರೇಶ್​ ಎಸ್​. ನಾವೂರು ಹಾಗೂ ತಮಿಳುನಾಡಿನ ನಿವೃತ್ತ ಯೋಧರ ಸಹಾಯದಿಂದ ಠಾಕೂರ್​ ಅವರ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ತಂದೆ ಕಾಣೆಯಾಗಿರುವ ಕುರಿತು ಮಕ್ಕಳು ಅಲ್ಲಿನ ಪೊಲೀಸ್​ ಠಾಣೆಗೂ ದೂರು ನೀಡಿದ್ದರು. ಹೀಗಾಗಿ ಕುಟುಂಬದ ಸಂಪರ್ಕ ಲಭಿಸಿ, ತುರ್ತಾಗಿ ಇಬ್ಬರು ಹೆಣ್ಣು ಮಕ್ಕಳು ಉಡುಪಿಗೆ ಬಂದಿದ್ದರು. ಆಸ್ಪತ್ರೆಯ ಮನೋವೈದ್ಯ ಡಾ. ವಾಸುದೇವ್​ ಹಾಗೂ ಡಾ. ಸುನೀಲ್​ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಪಡೆದು, ತಂದೆಯೊಂದಿಗೆ ತಮಿಳುನಾಡಿಗೆ ತೆರಳಿದರು.
ಕೂಡಲೇ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ, ಪೊಲೀಸರು, ಉಡುಪಿಯ ನಿವೃತ್ತ ಯೋಧರು, ವೈದ್ಯರು ಹಾಗೂ ಇಸಿಆರ್​ಸಿ ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ತಮಿಳುನಾಡಿನ ನಿವೃತ್ತ ಯೋಧ ಹಾಗೂ ಆತನ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದಾರೆ.