ಮುಂಬಯಿಯಲ್ಲಿ ತುಳುಕೂಟ ಫೌಂಡೇಷನ್ನ ಪ್ರಮುಖರಾದ ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ಯಶೋದಾ ಎಸ್. ಕೊಟ್ಯಾನ್ ಇತರರು ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ 'ತುಳುನಾಡ ಐಸಿರಿ' ಪ್ರಶಸ್ತಿ ಪ್ರದಾನ ಮಾಡಿದರು.
* ಗಮನ ಸೆಳೆದ ಸಮಾಜ ಸೇವಕ ವಿಶು ಶೆಟ್ಟಿ
* ಮುಂಬಯಿಯಲ್ಲಿ 'ತುಳುನಾಡ ಐಸಿರಿ' ಪ್ರಶಸ್ತಿ
ಉಡುಪಿ: ಸದಾ ಸಮಾಜ ಸೇವೆಯ ಮೂಲಕವೇ ಮನೆಮಾತಾಗಿರುವ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ತನಗೆ ಬಂದ ಪ್ರಶಸ್ತಿಯ ಹಣವನ್ನು ನೊಂದವರಿಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮುಂಬಯಿಯ ನಲ್ಲಸೋಪಾರದಲ್ಲಿರುವ ತುಳುಕೂಟ ಫೌಂಡೇಷನ್ (ರಿ.)ನ ಮಹಿಳಾ ವಿಭಾಗದ ವತಿಯಿಂದ ಮಾ.30ರಂದು ವಿಶ್ವ ಮಹಿಳಾ ದಿನ ಕಾರ್ಯಕ್ರಮ ಆಯೋಜಿಸಿತ್ತು. ನೊಂದ ಹಾಗೂ ಅಸಹಾಯಕ ಮಹಿಳೆಯರಿಗೆ ಆಸರೆಯಾಗುವ ಹಾಗೂ ಸಹಕರಿಸುವ ವಿಶು ಶೆಟ್ಟಿ ಅಂಬಲಪಾಡಿ ಅವರ ಕಾರ್ಯ ಗುರುತಿಸಿ ತುಳುಕೂಟದ ಅಧ್ಯಕ್ಷ ಶಶಿಧರ್ ಕೆ. ಶೆಟ್ಟಿ ಇನ್ನಂಜೆ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಎಸ್. ಕೊಟ್ಯಾನ್ ಅವರು 2026ನೇ ಸಾಲಿನ 'ತುಳುನಾಡ ಐಸಿರಿ' ಪ್ರಶಸ್ತಿ ನೀಡಿದ್ದರು. ಅಲ್ಲದೆ, 25 ಸಾವಿರ ರೂ. ಗೌರವ ಧನ ನೀಡಿ ಸನ್ಮಾನಿಸಿದ್ದರು.
ತನಗೆ ಬಂದ ಸನ್ಮಾನದ ಹಣವನ್ನು ಅಸಹಾಯಕ ಮಹಿಳೆಯರಿಗೆ ನೀಡಿ ಸಹಕರಿಸುವ ವಿಶು ಶೆಟ್ಟಿ, ಈ ಬಾರಿ ಬನ್ನಂಜೆಯ ದಲಿತ ಮಹಿಳೆ ಶಕುಂತಲಾ ಅವರ ಪತಿಯ ಚಿಕಿತ್ಸೆಗೆ 20 ಸಾವಿರ ರೂ. ಹಾಗೂ ಕಾಪುವಿನ ಬಾಲಕಿ ಹಿಮಾನಿ ಶೆಟ್ಟಿ ಚಿಕಿತ್ಸೆಗೆ 5 ಸಾವಿರ ರೂ. ನೀಡಿ ಸಹಕರಿಸಿದರು.
ಸಮಾಜ ಸೇವೆಯ ಕಾರ್ಯದಿಂದ ಮನಸ್ಸಿಗೆ ತೃಪ್ತಿ, ನೆಮ್ಮದಿ ಉಂಟಾಗುತ್ತದೆ. ನನ್ನ ಸೇವೆ ಗುರುತಿಸಿ ಸನ್ಮಾನಿಸಿ ನೀಡುವ ಹಣವನ್ನೂ ಸಹ ನಾನು ಸಮಾಜಸೇವೆಗೇ ವ್ಯಯಿಸುತ್ತೇನೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಹಾಗೂ ಕುಟುಂಬ ನಿರ್ವಹಿಸಲು ಕಷ್ಟ ಪಡುವ ನೊಂದ ಮಹಿಳೆಯರಿಗೆ ಪ್ರಶಸ್ತಿಯಿಂದ ಬಂದ ಹಣ ನೀಡುವ ಕಾರ್ಯ ಮಾಡುತ್ತಿದ್ದೇನೆ.