ಉಡುಪಿ ಶಂಕರಪುರ ಮಲ್ಲಿಗೆ. 
ಉಡುಪಿ

ಶಂಕರಪುರ ಮಲ್ಲಿಗೆ ದರ ತೀವ್ರ ಕುಸಿತ

* ಪಿತೃಪಕ್ಷ, ಭಾರಿ ಪ್ರಮಾಣದ ಉತ್ಪನ್ನ ಹಿನ್ನೆಲೆ

* ಬೆಳೆಗಾರರ ಸಂಘದಲ್ಲಿ ಅಟ್ಟೆಗೆ ಗರಿಷ್ಠ 160 ರೂ.

ಉಡುಪಿ: ಹೆಚ್ಚಿನ ದರದ ಮೂಲಕವೇ ಗಮನ ಸೆಳೆಯುತ್ತಿದ್ದ ಶಂಕರಪುರ ಮಲ್ಲಿಗೆ ಹೂವು ಇದೀಗ ಭಾರಿ ಪ್ರಮಾಣದಲ್ಲಿ ದರ ಕುಸಿತದ ಮೂಲಕವೂ ಗಮನ ಸೆಳೆದಿದೆ.

ಪಿತೃ ಪಕ್ಷದ ಹಿನ್ನೆಲೆಯಲ್ಲಿ ಹಾಗೂ ಗಣೇಶೋತ್ಸವದ ಬಳಿಕ ಯಾವುದೇ ದೊಡ್ಡ ಹಬ್ಬಗಳು ಇಲ್ಲದ್ದರಿಂದ ಮಲ್ಲಿಗೆಯ ಬೇಡಿಕೆ ತೀವ್ರ ಕುಸಿತಗೊಂಡಿದೆ. ಮಳೆ ಇಲ್ಲದಿದ್ದರೂ ಸಹ ಹೂವಿನ ಉತ್ಪನ್ನವೂ ಸಹ ಹೆಚ್ಚಳಗೊಂಡಿದ್ದು, ಮಾರುಕಟ್ಟೆಯಲ್ಲಿ ಮಲ್ಲಿಗೆ ಭರಾಟೆ ಹೆಚ್ಚಿದೆ. ಆದರೆ, ಬೆಲೆ ಗಣನೀಯ ಇಳಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಅಟ್ಟೆಗೆ 3 ಸಾವಿರ ರೂ.ವರೆಗೂ ದರ ಹೊಂದುವ ಮೂಲಕ ಚಿನ್ನದ ಬೆಲೆಯಿಂತಿದ್ದ ಮಲ್ಲಿಗೆ ಇದೀಗ ಅಟ್ಟೆಗೆ ಗರಿಷ್ಠ 240 ರೂ.ನಿಂದ 250 ರೂ. ದರವಿದೆ. ಬೆಳೆಗಾರರ ಸಂಘದಲ್ಲಿ ಅಟ್ಟೆಗೆ ಕೇವಲ 150ರಿಂದ 180 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಮುಂದಿನ ವಾರದಿಂದ ನವರಾತ್ರಿ ಹಬ್ಬ ಆರಂಭಗೊಳ್ಳಲಿದ್ದು, ಮಲ್ಲಿಗೆ ಹೂವಿಗೆ ಮತ್ತೆ ಬೇಡಿಕೆ ಹೆಚ್ಚಲಿದೆ. ಈಗಿದ್ದ ದರದ ಹತ್ತು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಡುಪಿಯ ಆದಿಶಕ್ತಿ ಫ್ಲವರ್ ಶಾಪ್​ನ ಶ್ರೀನಿವಾಸ ಮಾಹಿತಿ ನೀಡಿದ್ದಾರೆ.