ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್.ಮನೋಹರ್ ಮಾತನಾಡಿದರು. ಗಣೇಶ್ ರಾಜ್ ಸರಳಬೆಟ್ಟು, ಗುರುರಾಜ್ ಎಂ. ಶೆಟ್ಟಿ, ಜಯ ಶೆಟ್ಟಿ ಬನ್ನಂಜೆ, ಪ್ರಕಾಶ್ ಭಂಡಾರಿ ಕೊಳಲಗಿರಿ ಇದ್ದರು.
* ಉಡುಪಿ ಪರ್ಕಳದ ವಿಜ್ಞಾನಿ ಆರ್.ಮನೋಹರ್ ಮಾಹಿತಿ
* ಎರಡೂ ಕಣ್ಣಿನಿಂದ ನೋಡಬಹುದಾದ ಬೈನಾಕ್ಯೂಲರ್
ಉಡುಪಿ: ಸತತ ಪ್ರಯತ್ನದಿಂದ ಆವಿಷ್ಕರಿಸಿದ 200ಎಕ್ಸ್ ಭೂವೀಕ್ಷಣಾ ದ್ವಿನೇತ್ರ ದೂರದರ್ಶಕ (ಬೈನಾಕ್ಯೂಲರ್)ಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಿಂದ ಶ್ರೇಷ್ಠತೆಯ ಪ್ರಮಾಣಪತ್ರ ಲಭಿಸಿದೆ. ಈ ಬೈನಾಕ್ಯೂಲರ್ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು ಪ್ರಪಂಚದ ಗಮನ ಸೆಳೆದಿದೆ ಎಂದು ಉಡುಪಿ ಪರ್ಕಳದ ವಿಜ್ಞಾನಿ ಆರ್.ಮನೋಹರ್ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಸೆ.19) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಲ್ಯದಿಂದಲೇ ನನಗೆ ದೂರದರ್ಶಕದ ಕುರಿತು ಆಸಕ್ತಿಯಿತ್ತು. ಊದಿನಕಡ್ಡಿಯ ಅಂಡೆಯಲ್ಲಿ ದುರ್ಬೀನ್ ತಯಾರಿಸುತ್ತಿದೆ. ಇದೇ ನನಗೆ ವಿಶಿಷ್ಟವಾದ ದೂರದರ್ಶಕ ಆವಿಷ್ಕಾರ ಮಾಡಲು ಮೂಲ ಪ್ರೇರಣೆಯಾಯಿತು ಎಂದರು.
ವಿಶ್ವದಲ್ಲಿ ಒಂದೇ ಕಣ್ಣಿನಲ್ಲಿ ನೋಡಬಹುದಾದ ಕೇವಲ 40ಎಕ್ಸ್ ಸಾಮರ್ಥ್ಯದ ದೂರದರ್ಶಕವಿದೆ. ನಾನು ಆವಿಷ್ಕಾರ ಮಾಡಿರುವ ಈ ದೂರದರ್ಶಕದಲ್ಲಿ ಎರಡೂ ಕಣ್ಣಿನಿಂದ ಏಕಕಾಲದಲ್ಲಿ ನೋಡಲು ಅವಕಾಶ ಇರುವ ವಿಶಿಷ್ಟತೆ ಹೊಂದಿದೆ. ಸುಮಾರು 20 ಕಿ.ಮೀ. ದೂರದ ವಸ್ತು ಅಥವಾ ಪ್ರಕೃತಿಯ ಚಿತ್ರಣ ಅತ್ಯಂತ ಕ್ಲಿಯರ್ ಆಗಿ ಕಾಣಿಸುತ್ತದೆ. 1984ರಿಂದ ಎರಡೂ ಕಣ್ಣಿನಿಂದ ನೋಡಬಹುದಾದ ಬೈನಾಕ್ಯೂಲರ್ ಆವಿಷ್ಕಾರ ಮಾಡುತ್ತಿದ್ದೆ. ಪೇಟೆಂಟ್ ಸಲುವಾಗಿ ಅದನ್ನು ಬಹಿರಂಗ ಮಾಡಿರಲಿಲ್ಲ. 40 ವರ್ಷದ ಬಳಿಕ ಅದನ್ನು ಪ್ರಚಾರ ಮಾಡಿದ್ದೇನೆ ಎಂದರು.
ಬೆಲೆಯೂ ಕಡಿಮೆ
ವಿಶ್ವದಲ್ಲಿ ಲಭ್ಯವಿರುವ ಬೈನಾಕ್ಯೂಲರ್ಗಿಂತ ನನ್ನ ಆವಿಷ್ಕಾರದ ದೂರದರ್ಶಕ ಬೆಲೆಯೂ ಕಡಿಮೆಯಿದೆ. ವಿದೇಶದ ವಿವಿಧ ಖ್ಯಾತ ಕಂಪನಿಗಳ ಬೆಲೆ 4 ಲಕ್ಷ ರೂ.ನಿಂದ 11 ಲಕ್ಷ ರೂ.ವರೆಗೆ ಇದೆ. ಆದರೆ, ನನ್ನ ಬೈನಾಕ್ಯೂಲರ್ ಬೆಲೆ ಕೇವಲ 85 ಸಾವಿರ ರೂ. ಇದೆ. ಅಲ್ಲದೆ, 3 ಬಗೆಯ ಝೂಮ್ ವ್ಯವಸ್ಥೆ ಹೊಂದಿರುವುದು ಈ ದೂರದರ್ಶಕದ ವಿಶೇಷತೆಯಾಗಿದೆ ಎಂದರು.
ಸೌರಗ್ರಹದ ಕೌತುಕ ವೀಕ್ಷಣೆ
ಗೆಲಿಲಿಯೋ, ನ್ಯೂಟನ್ ಅವರ ದೂರದರ್ಶಕವೂ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲವೂ ಸಹ 40ಎಕ್ಸ್ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿಲ್ಲ. ಆದರೆ, ನನ್ನ ಆವಿಷ್ಕಾರದ ಬೈನಾಕ್ಯೂಲರ್ 200ಎಕ್ಸ್, 240ಎಕ್ಸ್ ಸಾಮರ್ಥ್ಯ ಹೊಂದಿದ್ದು 200 ಪಟ್ಟು ಹೆಚ್ಚಿನ ವೀಕ್ಷಣಾ ಸಾಮರ್ಥ್ಯ ಹೊಂದಿದೆ. ಸೌರಗ್ರಹಗಳ ಕೌತುಕ, ಸೂಪರ್ ಮೂನ್ನಂತಹ ದೃಶ್ಯವನ್ನು ಈ ಸಾಧನದ ಮೂಲಕ ಅತ್ಯಂತ ಹತ್ತಿರದಿಂದ ನೋಡಬಹುದಾಗಿದೆ. ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಿರುವುದಾಗಿ ಆರ್.ಮನೋಹರ್ ತಿಳಿಸಿದರು.
ತಾರಾಲಯ ರಚಿಸಿ
ಸಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಮಾತನಾಡಿ, ಮಲ್ಪೆಯ ಸೇಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತದಿಂದ ಡಿಜಿಟಲ್ ಮಾದರಿ ತಾರಾಲಯ ರಚಿಸಿದರೆ ಪ್ರವಾಸೋದ್ಯಮಕ್ಕೂ ಅನುಕೂಲ ಆಗಲಿದೆ. ಇಲ್ಲಿ ಮನೋಹರ್ ಅವರು ಆವಿಷ್ಕರಿಸಿದ ಬೈನಾಕ್ಯೂಲರ್ ಅಳವಡಿಸಿದರೆ ಆ ಸಾಧನದ ಮೂಲಕ ಆಕಾಶಕಾಯದ ಕೌತುಕ ಹಾಗೂ ಪ್ರಕೃತಿಯ ಸೌಂದರ್ಯ ವೀಕ್ಷಿಸಲು ಪ್ರವಾಸಿಗರಿಗೆ ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗುರುರಾಜ್ ಎಂ. ಶೆಟ್ಟಿ, ಜಯ ಶೆಟ್ಟಿ ಬನ್ನಂಜೆ, ಪ್ರಕಾಶ್ ಭಂಡಾರಿ ಕೊಳಲಗಿರಿ ಇದ್ದರು.