ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ಮೋಹನ್​ ಭಟ್​, ಪೂರ್ಣಿಮಾ ಸುರೇಶ್​, ವಸಂತಿ ರಾವ್​ ಕೊರಡ್ಕಲ್​, ಗೀತಾ ವಾಗ್ಳೆ, ರೇವತಿ, ವೀಣಾ ಶೆಟ್ಟಿ ಇದ್ದರು. 
ಉಡುಪಿ

ಒಗ್ಗಟ್ಟಿನಿಂದ ಮಹಿಳಾ ಸಮಾಜಕ್ಕೆ ಬಲ

* ಪರ್ಯಾಯ ವೇದವರ್ಧನ ಶ್ರೀ ಆಶೀರ್ವಚನ

* ರಾಜಾಂಗಣದಲ್ಲಿ ವಿಶ್ವ ಮಹಿಳಾ ದಿನ ಉದ್ಘಾಟನೆ

ಉಡುಪಿ: ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರೆಲ್ಲ ಏಕೆ ಒಟ್ಟಾಗಬೇಕು? ಮನೆಯಲ್ಲೇ ಆಚರಿಸಬಹುದಲ್ಲ? ವಾಟ್ಸಾಪ್​ನಲ್ಲಿ ಸಂದೇಶ ಕಳುಹಿಸಬಹುದಲ್ಲ? ಇದರಿಂದ ಒಗ್ಗಟ್ಟು ಮೂಡದು. ಎಲ್ಲರೂ ಒಗ್ಗೂಡಿದರೆ ಮಾತ್ರ ಮಹಿಳಾ ಸಮಾಜಕ್ಕೆ ಬಲ ಬರುತ್ತದೆ. ಶ್ರೀಕೃಷ್ಣನ ಜನ್ಮದ ಮೊದಲೂ ಯಾದವ ಕುಲ (ವಂಶ) ಇತ್ತು. ಆದರೆ, ಕೃಷ್ಣನ ಆಗಮನದ ಬಳಿಕ ಎಲ್ಲರನ್ನೂ ಒಗ್ಗೂಡಿಸಿ ಬಲಿಷ್ಠ ಸಾಮ್ರಾಜ್ಯ ಕಟ್ಟಿದ. ಅದೇರೀತಿ ತಾವೆಲ್ಲರೂ ಒಗ್ಗಟ್ಟಾಗಬೇಕು. 'ಮಹಿಳಾ ಬಲ' ತೋರ್ಪಡಿಸಬೇಕು ಎಂದು ಪರ್ಯಾಯ ಶೀರೂರು ಮಠದ ವೇಧವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ (ರಿ.)ದ ವತಿಯಿಂದ ಭಾನುವಾರ (ಮಾ.8) ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿಶೇಷ ಪ್ರಾತಿನಿಧ್ಯ

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಅಮೆರಿಕದಲ್ಲಿ 1908ರಲ್ಲಿ ಪ್ರಥಮ ಬಾರಿಗೆ ಹಕ್ಕು, ನ್ಯಾಯಕ್ಕಾಗಿ ಮಹಿಳಾ ಹೋರಾಟ ನಡೆದವು. ನಂತರದ ವರ್ಷಗಳಲ್ಲಿ ಅದು ವಿಶ್ವದ ಇನ್ನಿತರ ದೇಶಗಳಲ್ಲಿ ಕ್ರಾಂತಿ ಮೂಡಿಸಿತು. ಉಡುಪಿ ಜಿಲ್ಲೆಯಲ್ಲೂ ಸಹ ಮಹಿಳೆಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಮನೋರಮಾ ಮಧ್ವರಾಜ್​, ಶೋಭಾ ಕರಂದ್ಲಾಜೆ ಅವರು ಸಂಸದರಾಗಿ, ಸಚಿವರಾಗಿ ಸಂಸತ್​ನಲ್ಲಿ ಮಹಿಳಾಪರ ಧ್ವನಿ ಎತ್ತಿದವರಾಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರೂ ಮಹಿಳೆಯೇ ಆಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಶೇ.50 ಮಹಿಳಾ ಮೀಸಲಾತಿ ನೀಡುವ ಚಿಂತನೆಯಿದ್ದು, ಅದು ಜಾರಿಯಾದರೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮಹಿಳಾ ಸಂಸದ-ಶಾಸಕರನ್ನು ಹೆಚ್ಚು ಕಾಣಬಹುದಾಗಿದೆ ಎಂದರು.
ಪರಿವರ್ತನಾ ಫೌಂಡೇಷನ್​ ಉಡುಪಿಯ ಅಧ್ಯಕ್ಷ ಮೋಹನ್​ ಭಟ್​, ಲೇಖಕಿ ಹಾಗೂ ರಂಗನಟಿ ಪೂರ್ಣಿಮಾ ಸುರೇಶ್​ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯೆ ಗೀತಾ ವಾಗ್ಳೆ, ಕೋಶಾಧಿಕಾರಿ ರೇವತಿ, ಸಮಾಜ ಸೇವಕಿ ವೀಣಾ ಶೆಟ್ಟಿ ಉಪಸ್ಥಿತರಿದ್ದರು. 
ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಒಕ್ಕೂಟದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ಕಟಪಾಡಿಯ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಒಕ್ಕೂಟದ ತಾಲೂಕಾಧ್ಯಕ್ಷೆ ಪದ್ಮಾ ರತ್ನಾಕರ್​ ಸ್ವಾಗತಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಜ್ಯೋತಿ ರಾವ್​ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಹಾಯಾ ಮೇರಿ ವಂದಿಸಿದರು.
"

ಮನೆಯ ಎಲ್ಲ ಜವಾಬ್ದಾರಿ ಮಹಿಳೆಯ ಮೇಲಿದೆ. ಅವಳು ಸ್ತಬ್ಧಳಾದರೆ ಮನೆಯೇ ಸ್ತಬ್ಧವಾಗುತ್ತದೆ. ಸಮಾಜದಲ್ಲಿ ನಿತ್ಯ ಟಿಸುತ್ತಿರುವ ದೌರ್ಜನ್ಯ, ತೊಂದರೆಗಳು ಅಂತ್ಯಕಂಡಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಕುಡುಕ ಪತಿಯಿಂದಾಗಿ ಮಹಿಳೆ ತೊಂದರೆ ಅನುಭವಿಸುತ್ತಿದ್ದು, ಮಕ್ಕಳು ಹಾಗೂ ಕುಟುಂಬ ನಿರ್ವಹಣೆ ದೊಡ್ಡ ಸವಾಲಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಮಹಿಳೆ ಸುಶಿತಳಾಗಿದ್ದು, ಸ್ವಯಂ ತೀರ್ಮಾನ ಮಾಡುವಷ್ಟು ಬೆಳೆದಿದ್ದಾಳೆ. ಆದರೆ, ಇತ್ತೀಚೆಗೆ ಡೈವೋರ್ಸ್​ ಕೇಸ್​ ಹೆಚ್ಚುತ್ತಿರುವುದು ನಿಜಕ್ಕೂ ನೋವಿನ ಸಂಗತಿ.