ನೇಜಾರು ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಹಾಗೂ ಹತ್ಯೆಯಾದ ತಾಯಿ-ಮಕ್ಕಳು.
* ಭದ್ರತೆ ನೀಡಲು ಉಡುಪಿ ಕೋರ್ಟ್ ನಿರ್ದೇಶನ
* ನೇಜಾರಿನಲ್ಲಿ ನಡೆದಿದ್ದ ತಾಯಿ-ಮಕ್ಕಳ ಹತ್ಯೆ ಪ್ರಕರಣ
ಉಡುಪಿ: ಮಲ್ಪೆ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ, ಬೆಂಗಳೂರಿನ ಜೈಲಿನಲ್ಲಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿದ್ದಾನೆ. ಈ ಈ ಕುರಿತಂತೆ ಆರೋಪಿಗೆ ಭದ್ರತೆ ಒದಗಿಸಲು ಉಡುಪಿ ಜಿಲ್ಲಾ ನ್ಯಾಯಾಲಯವು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ (ಆ.22) ನಡೆದ ನೇಜಾರು ಹತ್ಯೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರೋಪಿ ಚೌಗುಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ನನಗೆ ಜೀವ ಬೆದರಿಕೆ ಹಾಕಿದ್ದಾಗಿ ಮಾಹಿತಿ ನೀಡಿದ್ದಾನೆ.
ಈ ಹಿಂದೆ ಆ.7ರಂದು ಪ್ರಕರಣದ ವಿಚಾರಣೆಗಾಗಿ ವೀಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ನನ್ನನ್ನು ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಮೂಲದವರು ಎನ್ನಲಾದ ಮೂರ್ನಾಲ್ಕು ಕೈದಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಜೈಲಿನಲ್ಲಿದ್ದರೂ ಸಹ ನನ್ನ ಜೀವಕ್ಕೆ ಅಪಾಯವಿದೆ ಎಂಬ ವಿಚಾರವನ್ನು ನ್ಯಾಯಾಧೀಶರಿಗೆ ತಿಳಿಸಿದ್ದಾನೆ.
ಆರೋಪಿಯ ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದ್ದು, ಆರೋಪಿಗೆ ಸೂಕ್ತ ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.
56 ಸಾಕ್ಷಿಗಳ ವಿಚಾರಣೆ
ಐವರು ಸೇರಿ ಈವರೆಗೆ ಒಟ್ಟು 56 ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆ ಮುಗಿದಿದೆ. ಪ್ರಸ್ತುತ ಸಾಕ್ಷಿ ವಿಚಾರಣೆಗೆ ಐವರು ಹಾಜರಾಗಿದ್ದು ಅದರಲ್ಲಿ ನಾಲ್ಕು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ನಡೆಯಿತು. ಸರ್ಕಾರಿ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವ ಮುಖ್ಯ ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಆರೋಪಿಪರ ವಕೀಲ ರಾಜು ಪೂಜಾರಿ ಪಾಟಿಸವಾಲು ನಡೆಸಿದರು.
ಸೆ.11ರಂದು ನಾಲ್ಕು ಸಾಕ್ಷಿದಾರರು ಹಾಗೂ ಸೆ.17ರಂದು ಆರು ಸಾಕ್ಷಿದಾರರ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.