ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಲೋಕಸಭೆಯಲ್ಲಿ ಸಂಸದ ಕೋಟ ಪೂಜಾರಿ ಆಗ್ರಹ
ಉಡುಪಿ: ಇಎಸ್ಐ ಯೋಜನೆಯು ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ವಿಮೆಯಾಗಿದೆ. ಆದರೆ, ಇಎಸ್ಐ ಯೋಜನೆಯ ಆದಾಯ ಮಿತಿ ಮಾಸಿಕ 21 ಸಾವಿರ ರೂಪಾಯಿಗೆ ಇನ್ನೂ ಸೀಮಿತವಾಗಿದ್ದು ಅದನ್ನು 35 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂದು ಉಡುಪಿ&ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ದೆಹಲಿಯ ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಮಂಡಿಸಿದ ಸಂಸದ ಪೂಜಾರಿ, ಇಎಸ್ಐ ಸೇವೆಯಿಂದ ದೇಶದಲ್ಲಿ ಅನೇಕ ಕುಟುಂಬಗಳು ಆರೋಗ್ಯಸೇವೆ ಪಡೆದು ನೆಮ್ಮದಿಯಿಂದಿವೆ. ಆದರೆ, ಈಗಿರುವ ವೇತನ ಮಿತಿ ತುಂಬ ಹಳೆಯದಾಗಿದ್ದು, ಅದನ್ನು ಪರಿಷತ ಮಾಡಬೇಕಾದ ಅಗತ್ಯಯೆ ಇದೆ ಎಂದರು.
ಸರ್ಕಾರಕ್ಕೆ ಆರ್ಥಿಕ ಹೊರೆಯಾಗದು
ಇತ್ತೀಚೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕನಿಷ್ಠ ವೇತನ ಹೆಚ್ಚಾಗಿದೆ. ಹೀಗಾಗಿ 21 ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರು ಇಎಸ್ಐ ಸೇವೆಯಿಂದ ವಂಚಿತರಾಗುತ್ತಿದ್ದಾರೆ. 22 ಸಾವಿರ ರೂ. ವೇತನ ಇದ್ದವರಿಗೆ ಈ ಸೌಲಭ್ಯ ಸಿಗದಾಗಿದೆ. ನೌಕರರು ಮತ್ತು ಉದ್ಯೋಗ ನೀಡುವ ಸಂಸ್ಥೆಗಳು ಒಟ್ಟಾಗಿ ಪ್ರೀಮಿಯಂ ಪಾವತಿಸುವ ಯೋಜನೆ ಇದಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಹೊರ ಬೀಳುವುದಿಲ್ಲ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯಿಂದ ವಂಚಿತ
ದಶಕದ ಹಿಂದೆ 10 ಸಾವಿರವಿದ್ದ ಕನಿಷ್ಠ ವೇತನ ಈಗ 25 ಸಾವಿರ ರೂ. ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಇಎಸ್ಐ ವೇತನ ಮಿತಿ ಪರಿಷ್ಕರಿಸದಿದ್ದರೆ ವೇತನದಲ್ಲಿ ಸಣ್ಣ ಏರಿಕೆಯಾದರೂ ದುಡಿದು ಬದುಕುವ ಅನೇಕ ಕಾರ್ಮಿಕರು ಆರೋಗ್ಯ ವಿಮಾ ರಕ್ಷಣೆಯಿಂದ ಲಭಿಸುವ ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಾರೆ. ಇಎಸ್ಐ ವೇತನ ಪರಿಷ್ಕರಿಸಲು ನಾನು ಈ ಹಿಂದೆ ಬರೆದ ಪತ್ರಕ್ಕೆ ಕಾರ್ಮಿಕ ಸಚಿವರು ಸ್ಪಂದಿಸಿದ್ದರು. ಬಡ ಕಾರ್ಮಿಕರ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಇಎಸ್ಐ ವೇತನ ಮಿತಿಯನ್ನು 35 ಸಾವಿರಕ್ಕೆ ಹೆಚ್ಚಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪೂಜಾರಿ ಆಗ್ರಹಿಸಿದರು.