ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಕೇಂದ್ರ ಸರ್ಕಾರಕ್ಕೆ ಪತ್ರ ರವಾನೆ
* ರೈತರಿಗೆ ಅನುಕೂಲ ಕಲ್ಪಿಸಲು ಆಗ್ರಹ
ಉಡುಪಿ: ಹವಾಮಾನ ಆಧಾರಿತ 2026&27ನೇ ಸಾಲಿನ ಬೆಳೆ ವಿಮಾ ಯೋಜನೆಯ ನೋಂದಾವಣೆಯ ಅವಧಿ ಜೂ.30 ಕೊನೆಯ ಅವಧಿಯಾಗಿದೆ. ರೈತರಿಗೆ ಅನುಕೂಲವಾಗುವಂತೆ ವಿಮಾ ಯೋಜನೆಗೆ ನೋಂದಣಿ ಮಾಡಲು ಇನ್ನೊಂದು ತಿಂಗಳು ಅವಧಿ ವಿಸ್ತರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಕೇಂದ್ರದ ಕೃಷಿ ಮತ್ತು ತೋಟಗಾರಿಕಾ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಮತ್ತು ಕೇಂದ್ರದ ಕೃಷಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ವಿಶೇಷವಾಗಿ ಅಡಿಕೆ, ಕಾಳುಮೆಣಸು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ರೈತರು ಆಸಕ್ತಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿ ಆಗಮಿಸಿದ್ದು, ಪತ್ರತಿಕೂಲ ಹವಾಮಾನದಿಂದ ಕೃಷಿ ಚಟುವಟಿಕೆ ತೊಡಕಾಗಿದೆ. ಅದರಿಂದಾಗಿ ರೈತಾಪಿ ವರ್ಗದವರು ಕೃಷಿ ಕೆಲಸದ ಒತ್ತಡದಲ್ಲಿದ್ದಾರೆ. ಅಲ್ಲದೆ, ಸಾಲು ಸಾಲಾಗಿ ಬಂದ ಸರ್ಕಾರಿ ರಜೆಗಳಿಂದ ಬ್ಯಾಂಕ್ ವ್ಯವಹಾರ ಅಲ್ಲಲ್ಲಿ ಸ್ಥಗಿತವಾಗಿದೆ. ಹೀಗಾಗಿ ನಿಗದಿತ ದಿನದೊಳಗೆ ವಮಾ ನೋಂದಣಿ ಮಾಡಿಕೊಳ್ಳಲು ಬಹುತೇಕರಿಗೆ ಸಾಧ್ಯವಾಗಿಲ್ಲ ಎಂದು ಕೇಂದ್ರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
"
ಬೆಳೆ ವಿಮಾ ನೋಂದಣಿಗೆ ಜೂ.30 ಅಂತಿಮ ದಿನವಾಗಿದ್ದರಿಂದ ಆ ಸೌಲಭ್ಯ ಪಡೆಯಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ವಿಮಾ ಯೋಜನೆಯಡಿ ತಾಂತ್ರಿಕ ದೋಷ ಸರಿಪಡಿಸುವ ಕಾರ್ಯವೂ ವಿಳಂಬವಾಗಿದ್ದರಿಂದ ಅನೇಕ ರೈತರು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂದಿನ 1 ತಿಂಗಳ ಕಾಲ ಜುಲೈ 31ರ ವರೆಗೆ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯ ನೋಂದಣಿ ಅವಧಿ ವಿಸ್ತರಿಸಿ ರೈತಾಪಿ ವರ್ಗಕ್ಕೆ ಪ್ರಯೋಜನ ಒದಗಿಸಬೇಕು ಎಂದು ಕೇಂದ್ರಕ್ಕೆ ಪತ್ರ ರವಾನಿಸಿದ್ದೇನೆ.
— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.