* ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
* ಕೇಂದ್ರ ಸರ್ಕಾರ, ರಾಜ್ಯ ಖಾತೆ ಸಚಿವರಿಗೆ ಪತ್ರ
ಉಡುಪಿ: ನ್ಯಾಚುರೋಪಥಿ ಮತ್ತು ಯೋಗ ವೈದ್ಯಕೀಯ ಪದ್ಧತಿಯನ್ನು ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ಎನ್ಸಿಐಎಸ್ಎಂ)ನ ವ್ಯಾಪ್ತಿಗೆ ಒಳಪಡಿಸುವಂತೆ ಹಾಗೂ ಶಿಕ್ಷಣ ಹಾಗೂ ಕ್ಲಿನಿಕಲ್ ಅಭ್ಯಾಸಕ್ಕೆ ರಾಷ್ಟ್ರಮಟ್ಟದ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆಯುಷ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪ್ ರಾವ್ ಜಿ. ಜಾಧವ್ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.
ಭಾರತೀಯ ನ್ಯಾಚುರೋಪಥಿ ಮತ್ತು ಯೋಗ ಪದವೀಧರ ವೈದ್ಯಕೀಯ ಸಂಘ ಸಲ್ಲಿಸಿದ ಮನವಿ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಏಕರೂಪ ಶಿಕ್ಷಣ ವ್ಯವಸ್ಥೆ
ದೇಶದ ಪ್ರಸ್ತುತ 22 ರಾಜ್ಯಗಳಲ್ಲಿ ಬಿಎನ್ವೈಎಸ್ ಪದವೀಧರರಿಗೆ ವೈದ್ಯಕೀಯ ನೋಂದಣಿ ದೊರೆಯುತ್ತಿದ್ದು, 92 ಯೋಗ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಈ ಎರಡೂ ಶಿಕ್ಷಣವನ್ನು ಎನ್ಸಿಐಎಸ್ಎಂ ವ್ಯವಸ್ಥೆಗೆ ಸೇರ್ಪಡೆಗೊಳಿಸಿದರೆ ದೇಶಾದ್ಯಂತ ಏಕರೂಪ ಶಿಕ್ಷಣ ಮಾನದಂಡ ಜಾರಿಗೆ ಬರಲಿದೆ. ಅಲ್ಲದೆ, ಬಿಎನ್ವೈಎಸ್ ಪದವೀಧರರಿಗೆ ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ನೋಂದಣಿಗೆ ಅವಕಾಶ ಲಭಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ ಹಾಗೂ ಸೋವಾ-ರಿಗ್ಪಾ ಪದ್ಧತಿಗಳ ಸಮಾನ ಸ್ಥಾನಮಾನವೂ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನ್ಯಾಚುರೋಪಥಿ ಮತ್ತು ಯೋಗ ವೈದ್ಯಕೀಯ ಪದ್ಧತಿಯನ್ನು ಶೀಘ್ರವಾಗಿ ಎನ್ಸಿಐಎಸ್ಎಂ ವ್ಯಾಪ್ತಿಗೆ ಸೇರ್ಪಡಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.