ಮತ್ಸ್ಯಗಂಧ ಹಾಗೂ ಸಿಎಸ್​ಟಿ ರೈಲುಗಳಲ್ಲಿ ವಿಪರೀತ ಕಳ್ಳತನ ನಡೆಯುತ್ತಿರುವ ಬಗ್ಗೆ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ಮತ್ಸ್ಯಗಂಧ, ಸಿಎಸ್​ಟಿ ರೈಲಿನಲ್ಲಿ ಕಳ್ಳತನದ ದೂರು

* ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡ ಸಂಸದ ಪೂಜಾರಿ

* ಮುಂದಿನ ವಾರ ಕೇಂದ್ರ ಸಚಿವರೊಂದಿಗೆ ಚರ್ಚೆ ಭರವಸೆ

ಉಡುಪಿ: ಮುಂಬಯಿ ಹಾಗೂ ಕರ್ನಾಟಕದ ಕರಾವಳಿ ಪ್ರದೇಶ ಬೆಸೆಯುವ ಪ್ರಸಿದ್ಧ ಮತ್ಸ್ಯಗಂಧ ಹಾಗೂ ಸಿಎಸ್​ಟಿ ರೈಲುಗಳಲ್ಲಿ ವಿಪರೀತ ಕಳ್ಳತನ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ವ್ಯವಸ್ಥಿತ ಜಾಲ ಅದರ ಹಿಂದಿದೆ ಎನ್ನುವುದು ಹಲವು ಪ್ರಕರಣಗಳಲ್ಲಿ ಕಂಡುಬಂದಿದೆ. ಮುಂದಿನ ವಾರವೇ ದೆಹಲಿಗೆ ತೆರಳಿ ಕೇಂದ್ರ ಸಚಿವ ಹಾಗೂ ಇಲಾಖೆಯ ಆರ್​ಪಿಎಫ್​ನ ಡೈರೆಕ್ಟರ್​ ಆಫ್​ ಜನರಲ್​ ಅವರನ್ನು ಭೇಟಿಯಾಗಿ ಈ ವಿಚಾರ ಚರ್ಚಿಸಲಿದ್ದೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ತನ್ನ ಫೇಸ್​ಬುಕ್​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಕೋಟ, ಸಾಮಾಜಿಕ ಜಾಲತಾಣ ಹಾಗೂ ಕಂಟೆಂಟ್​ ಕ್ರಿಯೇಟರ್ಸ್​ಗಳು ರೈಲ್ವೆಯಲ್ಲಿ ಆಗುತ್ತಿರುವ ಕಳ್ಳತನದ ಕುರಿತು ಬೆಳಕು ಚೆಲ್ಲಿದ್ದನ್ನೂ ವೀಕ್ಷಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆ

ರೈಲುಗಳ ಎಲ್ಲ ಬೋಗಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಗೊಳಿಸಿ ದೆಹಲಿ ಮಟ್ಟದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಮನವಿ ಮಾಡಲಿದ್ದೇನೆ. ಈಗಾಗಲೇ ಹಲವು ಕಡೆಗಳಲ್ಲಿರುವ ಸಿಸಿ ಕ್ಯಾಮರಾಗಳ ವ್ಯವಸ್ಥೆ ಸದೃಢಗೊಳಿಸುವಂತೆಯೂ ಮನವರಿಕೆ ಮಾಡಲಿದ್ದೇನೆ ಎಂದಿದ್ದಾರೆ.

ರೈಲು ವ್ಯವಸ್ಥೆ ದೇಶದ ಜೀವನಾಡಿ. ಸಾಮಾನ್ಯ ಜನರು ಪ್ರಯಾಣಿಸುವ ಈ ರೈಲುಗಳಲ್ಲಿ ಆಹಾರಗಳಲ್ಲಿ ಮತ್ತು ಬರುವ ಪದಾರ್ಥ ನೀಡುವ ಕುರಿತೂ ದೂರುಗಳು ಕೇಳಿಬರುತತ್ತಿವೆ. ಜನರ ಜೀವದೊಂದಿಗೆ ಚಲ್ಲಾಟವಾಡುವ ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡುವುದು ನಮ್ಮ ಜವಾಬ್ದಾರಿ. ಹಲವಾರು ಪ್ರಕರಣಗಳನ್ನು ಈಗಾಗಲೇ ಪೊಲೀಸರು ಕಂಡುಹಿಡಿದು ತಪ್ಪಿತಸ್ಥರಿಗೆ ಶಿಕ್ಷೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬಲವಾದ ವ್ಯವಸ್ಥೆ ಜಾರಿಗೊಳಿಸಿ ದುಷತ್ಯಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಗಮನ ಸೆಳೆದ ಎಲ್ಲರಿಗೂ ಧನ್ಯವಾದಗಳು ಎಂದು ಸಂಸದ ಕೋಟ ಪೂಜಾರಿ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ.