ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಮಾಳ-ತನಿಕೋಡು ಗೇಟ್ ರಸ್ತೆ ಕಾಮಗಾರಿಯನ್ನು ಕೋಟ ಶ್ರೀನಿವಾಸ ಪೂಜಾರಿ ಪರಿಶೀಲಿಸಿದರು. ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಇತರರು ಇದ್ದರು.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
* ಮಾಳ-ತನಿಕೋಡು ಗೇಟ್ ರಸ್ತೆ ಕಾಮಗಾರಿ ಪರಿಶೀಲನೆ
ಉಡುಪಿ: ಮಾಳ-ತನಿಕೋಡು ಗೇಟ್ ಹೆದ್ದಾರಿ ಅಭಿವೃದ್ಧಿಗೆ 550 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಕಾಮಗಾರಿಗೆ ಅಗತ್ಯವಿರುವ ಅರಣ್ಯ ಭೂಮಿ ಸಂಬಂಧಿತ ಪ್ರಕ್ರಿಯೆ ಪ್ರಗತಿಯಲ್ಲಿವೆ. ಮಾಳ ಗೇಟ್ ಆರಂಭದಿಂದ ರಸ್ತೆ ಇಕ್ಕೆಲಗಳಲ್ಲಿನ ಅರಣ್ಯಭೂಮಿ ತೆರವಿಗೆ ಕಂದಾಯ ಇಲಾಖೆಯ ಮೂಲಕ ಅರಣ್ಯ ಇಲಾಖೆಗೆ ಸುಮಾರು 50 ಎಕರೆ ಭೂಮಿ ವರ್ಗಾಯಿಸಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕಾರ್ಕಳ ತಾಲೂಕಿನ ಮಾಳ ಗೇಟ್ನಿಂದ ಎಸ್.ಕೆ. ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್ವರೆಗಿನ 29 ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ (ಮೇ 29) ಸ್ಥಳ ಪರಿಶೀಲಿಸಿ ಮಾತನಾಡಿದರು.
ಇಲಾಖೆಯ ಮಾಹಿತಿ ಪ್ರಕಾರ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸೇರಿದಂತೆ ಮೂರು ಸೇತುವೆಗಳು ಈ ಹಿಂದೆಯೇ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದ್ದರಿಂದ ಕಾಮಗಾರಿ ರದ್ದಾಗಿತ್ತು. ಇದೀಗ ಅಗತ್ಯ ಅನುಮತಿ ದೊರಕುವ ನಿರೀಕ್ಷೆ ಇದೆ. ಹೀಗಾಗಿ ರಸ್ತೆ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ 1999ರಿಂದ ಅಂದರೆ ಸುಮಾರು 25 ವರ್ಷದಿಂದ ನನೆಗುದಿಗೆ ಬಿದ್ದಿರುವ ಮಾಳ&ತನಿಕೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ ಎಂಬ ವಿಶ್ವಾಸವಿದೆ. ಭೂಮಿ ವರ್ಗಾವಣೆ ಕುರಿತು ಕಡತ ವಿಲೇವಾರಿಗಾಗಿ ಶನಿವಾರ (ಮೇ 30) ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ.
— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.