ಉಡುಪಿ ಶಾಸಕ ಯಶ್ಪಾಲ್ ಸುವರ್ಣ.
* ಸಿಎಂ ಸಿದ್ದರಾಮಯ್ಯಗೆ ಶಾಸಕ ಯಶ್ಪಾಲ್ ಸುವರ್ಣ ಪತ್ರ
* ಮುಷ್ಕರದಿಂದ ರೈತರಿಗೆ, ಜನಸಾಮಾನ್ಯರಿಗೆ ತೊಂದರೆ
ಉಡುಪಿ: ಪರವಾನಗಿ ಭೂಮಾಪಕರು 40 ದಿನದಿಂದ ಮುಷ್ಕರ ನಿರತರಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಿತ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಚಾರವಾಗಿ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪತ್ರ ರವಾನಿಸಿದ್ದಾರೆ.
ಭೂಮಾಪನ, ಸರ್ವೇ, ಪಹಣಿ ತಿದ್ದುಪಡಿ, ಹದ್ದುಬಸ್ತು, ಖಾತೆ ಬದಲಾವಣೆ ಹಾಗೂ ಜಮೀನು ಖರೀದಿ, ಪರಾಭಾರೆಗೆ ಸಂಬಂಧಿತ ಅನೇಕ ಕಾರ್ಯಗಳು ಸಂಪೂರ್ಣ ನಿಂತಿದೆ. ಹೀಗಾಗಿ ರೈತರು, ಬಡಜನರು, ಮನೆ ಸುವರ್ಣ ಕ್ಕೆ ಸಾಲ ಪಡೆಯುವವರು ಹಾಗೂ ಸಾಮಾನ್ಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಚೇರಿಗೆ ನಿತ್ಯವೂ ಅಲೆದಾಟ
ರಾಜ್ಯಾದ್ಯಂತ 6 ಸಾವಿರಕ್ಕೂ ಅಧಿಕ ಪರವಾನಗಿ ಭೂಮಾಪಕರು, ಉಡುಪಿ ಜಿಲ್ಲೆಯಲ್ಲಿ 118 ಮಂದಿ ಹಾಗೂ ಉಡುಪಿ ತಾಲೂಕಿನಲ್ಲಿ 22 ಮಂದಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ದಿನನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಭೂಮಾಪನ ಅರ್ಜಿಗಳ ವಿಲೇವಾರಿ ಬಾಕಿ ಇದೆ. ಉಡುಪಿ ತಾಲೂಕಿನಲ್ಲೂ ಸಹ 350ಕ್ಕೂ ಅಧಿಕ ಭೂಮಾಪನ ಅರ್ಜಿ ಬಾಕಿಯಾಗಿದೆ.
ಈ ಗಂಭೀರ ಸಮಸ್ಯೆ ತಕ್ಷಣ ಪರಿಗಣಿಸಿ ಪರವಾನಗಿ ಭೂಮಾಪಕರೊಂದಿಗೆ ಮಾತುಕತೆ ನಡೆಸಿ, ಅವರ ನ್ಯಾಯಸಮ್ಮತ ಎಲ್ಲ ಬೇಡಿಕೆ ಈಡೇರಿಸಿ. ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಾಪನ ಸೇವೆಗಳು ಮರುಪ್ರಾರಂಭ ಆಗುವಂತೆ ಮುಖ್ಯಮಂತ್ರಿಯಾದ ತಾವು ತುರ್ತಾಗಿ ಮಧ್ಯಪ್ರವೇಶಿಸಿ ಎಂದು ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.