ಅಧಿಕಾರಿಗಳೊಂದಿಗೆ ಮಲ್ಪೆಯ ಬಂದರಿಗೆ ಭೇಟಿ ನೀಡಿದ ಯಶ್​ಪಾಲ್​ ಸುವರ್ಣ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸುರೇಶ್​ ಸಾಲ್ಯಾನ್​, ರವಿ ಸಾಲ್ಯಾನ್​, ರಮೇಶ್​ ಕೋಟ್ಯಾನ್​, ಲಕ್ಷೀಶ್​ ಬಂಗೇರ ಇತರರಿದ್ದರು. 
ಉಡುಪಿ

ಮಲ್ಪೆ ದ್ವಾರ ಕಾಮಗಾರಿ ಪೂರ್ಣಗೊಳಿಸಿ

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸೂಚನೆ

* ಬಂದರು ಪ್ರದೇಶಕ್ಕೆ ಭೇಟಿ, ಪರಿಶೀಲನೆ

ಉಡುಪಿ: ಮಲ್ಪೆ ಬಂದರಿನಲ್ಲಿ ನಿರ್ಮಿಸುತ್ತಿರುವ ನೂತನ ಪ್ರವೇಶ ದ್ವಾರದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಇಲ್ಲಿನ ಪಾರ್ಕಿಗ್​ ಪ್ರದೇಶದಲ್ಲಿ ಕಾಮಗಾರಿ ನಿಮಿತ್ತ ಸಂಗ್ರಹಿಸಿರುವ ಮರಳನ್ನೂ ಸಹ ತಕ್ಷಣ ತೆರವುಗೊಳಿಸಿ ವಾಹನಗಳ ಪಾರ್ಕಿಂಗ್​ಗೆ ಅವಕಾಶ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.
ಜೂನ್​ ಮತ್ತು ಜುಲೈ ಎರಡು ತಿಂಗಳ ಮೀನುಗಾರಿಕಾ ನಿಷೇಧದ ಬಳಿಕ ಆ.1ರಿಂದ ಮೀನುಗಾರಿಕಾ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಮಲ್ಪೆ ಬಂದರಿಗೆ ಅಧಿಕಾರಿಗಳೊಂದಿಗೆ ಶನಿವಾರ (ಆ.1) ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿ ಮಾತನಾಡಿದರು.
ಬಂದರಿನ ನಿರ್ಗಮನ ದ್ವಾರ ಅಗಲೀಕರಣಗೊಳ್ಳುತ್ತಿದ್ದು, ಹಲವು ವರ್ಷದಿಂದ ಅಲ್ಲಿದ ಆಟೋ ನಿಲ್ದಾಣವನ್ನು ಸ್ಥಳಾಂತರಿಸಬೇಕಿದೆ. ಆಟೋ ಚಾಲಕರ ಮನವಿಯಂತೆ ಈಗಾಗಲೇ ಗುರುತಿಸಿರುವ ಸೂಕ್ತ ಜಾಗಕ್ಕೆ ಸ್ಥಳಾಂತರಿಸಲು ಅಗತ್ಯ ಸಹಕಾರವನ್ನೂ ನೀಡಬೇಕು ಎಂದರು.
ಬಂದರಿನ ಮಂಜಿ ಧಕ್ಕೆ ಹಾಗೂ ಅಲ್ಲಿನ ಪರಿಸರದಲ್ಲಿ ರಾತ್ರಿ ವೇಳೆ ದಾರಿ ದೀಪದ ಸಮಸ್ಯೆಯಿದೆ. ತಕ್ಷಣವೇ ಸಮರ್ಪಕವಾಗಿ ದಾರಿ ದೀಪದ ವ್ಯವಸ್ಥೆ ಮಾಡಬೇಕು. ಬಂದರಿನ ಸ್ವಚ್ಛತೆ, ಭದ್ರತಾ ದೃಷ್ಟಿಯಿಂದ ಸೆಕ್ಯುರಿಟಿ ಸಿಬ್ಬಂದಿ, ಸಿಸಿಟಿ ವಿ ಅಳವಡಿಕೆ ಮೊದಲಾದ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲಿನ ಮೀನುಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮೀನುಗಾರರ ಮುಖಂಡರಾದ ಸುರೇಶ್​ ಸಾಲ್ಯಾನ್​, ರವಿ ಸಾಲ್ಯಾನ್​, ರಮೇಶ್​ ಕೋಟ್ಯಾನ್​, ಲಕ್ಷೀಶ್​ ಬಂಗೇರ, ಮಲ್ಪೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮೀನುಗಾರಿಕಾ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.