ಉಡುಪಿ ನಗರಸಭೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಯಶ್​ಪಾಲ್​ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ ಹಾಗೂ ಸಿಬ್ಬಂದಿ ಇದ್ದರು. 
ಉಡುಪಿ

ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಎಚ್ಚರಿಕೆ 

* ನಗರಸಭೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಭೇಟಿ

ಉಡುಪಿ: ನಗರಸಭೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ನೂರಾರು ಕಡತ ಬಾಕಿ ಇದೆ. ಇಲ್ಲಿನ ಸಿಬ್ಬಂದಿ ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಬಗ್ಗೆ ಪೂರಕ ಮಾಹಿತಿ ಒದಗಿಸಲೂ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಎಚ್ಚರಿಕೆ ನೀಡಿದರು.
ಉಡುಪಿ ನಗರಸಭೆಯಲ್ಲಿ ಜನನ-ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ಅಧಿಕಾರಿಗಳಿಂದ ವಿಳಂಬ ಧೋರಣೆ, ಅಸಹಕಾರದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ (ಜೂ.30) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ತಿದ್ದುಪಡಿ ಅರ್ಜಿಗಳು ಬರುತ್ತಿರುತ್ತವೆ. ಜನನ ಪ್ರಮಾಣ ಪತ್ರ ಅರ್ಜಿ ಸ್ವೀಕರಿಸುವಾಗಲೇ ಅರ್ಜಿದಾರರಿಗೆ ಮಾಹಿತಿ ಕೊರತೆ ಇದ್ದಲ್ಲಿ ಸೂಕ್ತ ಮಾಹಿತಿ ನೀಡಬೇಕು. ಅದರ ಬದಲಾಗಿ ಜನರೊಂದಿಗೆ ಮನ ಬಂದಂತೆ ಮಾತನಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಅಗತ್ಯವಿರುವ ಸಿಬ್ಬಂದಿ ನಿಯೋಜಿಸುವಂತೆ ಹಾಗೂ ಕಂಪ್ಯೂಟರ್​ ವ್ಯವಸ್ಥೆ ಮಾಡುವಂತೆ ಪೌರಾಯುಕ್ತ ಮಹಾಂತೇಶ್​ ಹಂಗರಗಿ ಅವರಿಗೆ ಶಾಸಕ ಯಶ್​ಪಾಲ್​ ಸಲಹೆ ನೀಡಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ ಹಾಗೂ ಸಿಬ್ಬಂದಿ ಇದ್ದರು.