ಉಪ್ಪೂರು ಗ್ರಾಪಂನ ನಾಗರಜಿಡ್ದ ಗ್ರಾಮದ ಬಳಿ ನದಿ ಕೊರೆತ ಆಗಿರುವುದನ್ನು ಶಾಸಕ ಯಶ್​ಪಾಲ್​ ಪರಿಶೀಲಿಸಿದರು. ಸತೀಶ್​ ಪೂಜಾರಿ, ಅವಿನಾಶ್​ ಶೆಟ್ಟಿ, ಮಹೇಶ್​ ಕೋಟ್ಯಾನ್​, ರಾಜೇಶ್​ ರಾವ್​, ಉಮೇಶ್​, ಪ್ರಮೋದ್​, ಆದರ್ಶ, ಅಧಿಕಾರಿಗಳಾದ ಸುನೀಲ್​, ಪ್ರೀತಮ್​ ಇದ್ದರು. 
ಉಡುಪಿ

ನಾಗರಜಿಡ್ಡ ನದಿ ಭಾಗಕ್ಕೆ ತಡೆಗೋಡೆ ನಿರ್ಮಿಸಿ

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

ನದಿ ಕೊರೆತ ಪ್ರದೇಶಕ್ಕೆ ಭೇಟಿ, ಪರಿಶೀಲನೆ

ಉಡುಪಿ: ನಾಗರಜಿಡ್ಡ ಭಾಗದಲ್ಲಿ ನದಿ ಕೊರೆತ ತೀವ್ರಗೊಂಡಿದ್ದರಿಂದ ಇಲ್ಲಿನ ಹಲವಾರು ತೆಂಗಿನಮರ ಕೊಚ್ಚಿ ಹೋಗಿದೆ. ಕಾಂಕ್ರೀಟ್​ ರಸ್ತೆಯೂ ಕಡಿದು ಹೋಗುವ ಸಾಧ್ಯತೆ ಇದೆ. ಸಮಸ್ಯೆ ಇರುವ ಈ ಸ್ಥಳಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಈಗಾಗಲೇ ಅನುದಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಪಂನ ನಾಗರಜಿಡ್ದ ಗ್ರಾಮದ ಬಳಿ ನದಿ ಕೊರೆತ ಪ್ರದೇಶಕ್ಕೆ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ ಮಾತನಾಡಿದರು.
ನದಿಯ ಪಶ್ಚಿಮ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಬೇಕು. ಮಳೆಗಾಲದಲ್ಲಿ ನದಿಯ ನೀರಿನ ಸರಾಗ ಹರಿವು ಇರುವಂತಾಗಲು ಈಗಲೇ ಕ್ರಮ ವಹಿಸಿ. ನದಿಯ ಪೂರ್ವ ಬದಿಯಲ್ಲೂ ಸಹ ಕೊರೆತ ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮದ ಪ್ರಮುಖರಾದ ಸತೀಶ್​ ಪೂಜಾರಿ, ಅವಿನಾಶ್​ ಶೆಟ್ಟಿ, ಮಹೇಶ್​ ಕೋಟ್ಯಾನ್​, ರಾಜೇಶ್​ ರಾವ್​, ಉಮೇಶ್​, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ್​, ಪಿಡಿಒ ಆದರ್ಶ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುನೀಲ್​, ಸಹಾಯಕ ಅಭಿಯಂತ ಪ್ರೀತಮ್​ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.