ಮಣಿಪಾಲದ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯಶ್ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಮಟ್ಟಾರು ವಸಂತ ಕಿಣಿ, ಪ್ರಭಾಕರ್ ಪೂಜಾರಿ, ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ವಿಶ್ವನಾಥ ಭಟ್, ಚಿತ್ತರಂಜನ್ ಭಟ್ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ
* ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಗುದ್ದಲಿಪೂಜೆ
ಉಡುಪಿ: ರಸ್ತೆ ಅಭಿವೃದ್ಧಿ ಕಾರ್ಯಕ್ಕೂ ಸರ್ಕಾರದಿಂದ ಅನುದಾನದ ಕೊರತೆ ಉಂಟಾಗಿದ್ದರಿಂದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ಅವರ ಸಹಕಾರದಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತಾಗಿದೆ. ಕ್ಷೇತ್ರದ ಶಾಸಕನಾಗಿ ಸ್ಥಳೀಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದಾಗ ಸಿಸ್ಆರ್ ನಿಧಿಯಿಂದ ಗರಿಷ್ಠ ಮೊತ್ತ ನೀಡುವ ಮೂಲಕ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಅವರೆಲ್ಲರ ಸಹಕಾರ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಶನಿವಾರ (ಮಾ.14) ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ನಿತ್ಯವೂ ಸಂಚಾರ ಸಮಸ್ಯೆ
ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹದಗೆಟ್ಟು ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯ ಮೂಲಕ 40 ಲಕ್ಷ ರೂ. ಅನುದಾನ ಒದಗಿಸಿ ಸ್ಥಳಿಯ ಕಂಪನಿಗಹಳ ಸಿಎಸ್ಆರ್ ಅನುದಾನದ ಮೂಲಕ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದರು.
ಅಭಿನಂದನೆ ಸಲ್ಲಿಸುತ್ತೇವೆ
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಮಟ್ಟಾರು ವಸಂತ ಕಿಣಿ ಮಾತನಾಡಿ, ಕೈಗಾರಿಕಾ ಪ್ರದೇಶದ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಸಂಚಾರಕ್ಕೆ ಆಗುತ್ತಿದ್ದ ಸಮಸ್ಯೆ ನಿವಾರಣೆ ಆಗಲಿ ಎಂದರು.
ಉಡುಪಿ ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಭಟ್, ಚಿತ್ತರಂಜನ್ ಭಟ್, ವಲ್ಲಭ್ ಭಟ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಕೃಷ್ಣ ಕುಲಾಲ್, ಸದಾನಂದ ಪ್ರಭು, ನಿತಿನ್ ಪೈ, ಪೃಥ್ವಿರಾಜ್ ಹಾಗೂ ವಿವಿಧ ಕಂಪನಿಗಳ ಪ್ರಮುಖರು ಉಪಸ್ಥಿತರಿದ್ದರು.