ಕೊಡವೂರು ವಾರ್ಡ್​ನ ವಿಪ್ರ ಭವನದ ಬಳಿ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು. ಪ್ರಭಾಕರ್​ ಪೂಜಾರಿ, ವಿಜಯ್​ ಕೊಡವೂರು, ರವಿರಾಜ್​ ಹೆಗ್ಡೆ, ಕಾಳು ಸೇರಿಗಾರ, ರಾಘವೇಂದ್ರ ರಾವ್​, ಹರೀಶ್​ ಕೆ. ಕೋಟ್ಯಾನ್​ ಇತರರಿದ್ದರು. 
ಉಡುಪಿ

ಇಂದ್ರಾಣಿ ನದಿಯಲ್ಲಿನ ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

* ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಗುದ್ದಲಿ ಪೂಜೆ 

ಉಡುಪಿ: ಕೊಡವೂರು ಜನತೆಯ ಬಹುದಿನದ ಬೇಡಿಕೆಯಾಗಿದ್ದ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿದ್ದು, ಕಾಮಗಾರಿ ಆರಂಭಗೊಂಡಿದೆ. ಇಂದ್ರಾಣಿ ನದಿಯು ತ್ಯಾಜ್ಯ ನೀರಿನಿಂದ ಮಲಿನಗೊಂಡಿದ್ದರಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ 30 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಆ ಸಮಸ್ಯೆಗೆ ಪರಿಹಾರಗೊಳ್ಳಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿ ನಗರಸಭೆಯ ಕೊಡವೂರು ವಾರ್ಡ್​ನ ವಿಪ್ರ ಭವನದ ಬಳಿ ಸಣ್ಣ ನೀರಾವರಿ ಇಲಾಖೆಯ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ 1.5 ಕಿಮೀ ವ್ಯಾಪ್ತಿಯಲ್ಲಿ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರಸಭಾ ನಿಕಟಪೂರ್ವ ಸದಸ್ಯ ವಿಜಯ್​ ಕೊಡವೂರು ಮಾತನಾಡಿ, ಶಾಸಕ ಯಶ್​ಪಾಲ್​ ಅವರು ನಮ್ಮವಾರ್ಡ್​ನ 3 ಕೆರೆಗಳ ಅಭಿವೃದ್ಧಿಗೆ ಸುಮಾರು 2.25 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಅಲ್ಲದೆ, ರಸ್ತೆಗಳ ಅಭಿವೃದ್ಧಿ, ದಾರಿದೀಪ ವ್ಯವಸ್ಥೆ, ನಮ್ಮ ಕ್ಲಿನಿಕ್​ ಸಹಿತ ವಿವಿಧ ಯೋಜನೆಗಳಿಗೆ ವಿಶೇಷ ಸಹಕಾರ ನೀಡಿದ್ದಾರೆ. ಇದೀಗ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೂ ಚಾಲನೆ ನೀಡಿದ್ದು, ವಾರ್ಡ್​ನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಸ್ಥಳೀಯ ಮುಖಂಡರಾದ ರವಿರಾಜ್​ ಹೆಗ್ಡೆ, ಕಾಳು ಸೇರಿಗಾರ, ರಾಘವೇಂದ್ರ ರಾವ್​, ಹರೀಶ್​ ಕೆ. ಕೋಟ್ಯಾನ್​, ನಾರಾಯಣ ಬಲ್ಲಾಳ್​, ವಿನಯ್​ ಪಡುಕರೆ, ಹರೀಶ್​ ಪಾಳೆಕಟ್ಟೆ, ಅಮಿತ್​ ಗರ್ಡೆ, ವಿನಯ ಗರ್ಡೆ ಉಪಸ್ಥಿತರಿದ್ದರು. ಪ್ರಭಾತ್​ ಕೊಡವೂರು ಸ್ವಾಗತಿಸಿದರು. ರವಿ ಸಾಲ್ಯಾನ್​ ಪಾಳೆಕಟ್ಟೆ ವಂದಿಸಿದರು.