ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಮ್ಯಾರಥಾನ್​ ನಡೆಯಿತು. 
ಉಡುಪಿ

ವ್ಯಾಯಾಮ ಬದುಕಿನ ಭಾಗವಾಗಲಿ: ಡಾ.ಸುಶೀಲ್​ ಜತ್ತನ್ನ

ಉಡುಪಿ: ಇಂದಿನ ಜೀವನ ಶೈಲಿಯಿಂದಾಗಿ ದೈಹಿಕ ವ್ಯಾಯಾಮ ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ಮ್ಯಾರಾಥಾನ್​ ಆಯೋಜಿಸುವುದು ಅತೀ ಅಗತ್ಯವಾಗಿದೆ. ವ್ಯಾಯಾಮ ಬದುಕಿನ ಭಾಗವಾಗಬೇಕು. ಇದರಿಂದ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ ಎಂದು ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಸುಶೀಲ್​ ಜತ್ತನ್ನ ಹೇಳಿದರು.
ರನ್ನರ್ಸ್​ ಕ್ಲಬ್​ ಸಹಯೋಗದಲ್ಲಿ ಲೊಂಬಾರ್ಡ್​ ಆಸ್ಪತ್ರೆ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಮ್ಯಾರಥಾನ್​ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಮಾತನಾಡಿ, ಜೀವನ ಶೈಲಿಯ ಬದಲಾವಣೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇದನ್ನು ಬದಲಾಯಿಸಿಕೊಳ್ಳುವುದು ಅತೀ ಅಗತ್ಯ. ಪ್ರಾರ್ಥನಾ ಸ್ಥಳಗಳಿಗೆ ಹೋದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ ಕ್ರೀಡಾಂಗಣಕ್ಕೆ ಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇ ದೈಹಿಕ ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ, ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಕುಮಾರ್​ ಶೆಟ್ಟಿ, ಐಎಂಎ ಉಡುಪಿ ಕರಾವಳಿ ಅಧ್ಯ ಡಾ.ಅಶೋಕ್​ ಕುಮಾರ್​, ರನ್ನರ್​ ಕ್ಲಬ್​ ಅಧ್ಯಕ್ಷ ಡಾ.ತಿಲಕ್​ ಚಂದ್ರಪಾಲ್​, ಕಾರ್ಯದರ್ಶಿ ದಿವಾಕರ್​, ಕ್ಲಬ್​ನ ಜೊತೆ ಕಾರ್ಯದರ್ಶಿ ದಿವ್ಯೇಶ್​ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಓಟ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಅದೇ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ವಿವಿಧ ವಯೋಮಾನದ ಪುರುಷ, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ 21 ಕಿ.ಮಿ., 10ಕಿ.ಮಿ., 5 ಕಿ.ಮಿ., 3ಕಿ.ಮಿ. ಸಾರಿ ರನ್​ ಹಾಗೂ ಫನ್​ ರನ್​ಗಳಲ್ಲಿ 3000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಮ್ಯಾರಥಾನ್​ಗೆ ಚಾಲನೆ
ಮುಂಜಾನೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ, ಮಂಗಳೂರು ನಗರ ಪೊಲೀಸ್​ ಕಮಿಷನರ್​ ಸುಧೀರ್​ ಕುಮಾರ್​ ರೆಡ್ಡಿ, ಅದಾನಿ ಗ್ರೂಪ್​ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್​ ಆಳ್ವ, ಮಿಷನ್​ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್​ ಜತ್ತನ್ನ ಚಾಲನೆ ನೀಡಿದರು.