ಉಡುಪಿ ಮ್ಯಾರಥಾನ್ ಕರಪತ್ರವನ್ನು ಶಾಸಕ ಯಶಪಾಲ್ ಸುವರ್ಣ, ಡಿಸಿ ಸ್ವರೂಪ ಬಿಡುಗಡೆಗೊಳಿಸಿದರು.
ಉಡುಪಿ: ಜಿಲ್ಲಾಡಳಿತ ಮತ್ತು ಎನ್ಇಬಿ ಸ್ಪೋರ್ಟ್ಸ್ ಸಂಸ್ಥೆ ಆಶ್ರಯದಲ್ಲಿ ಜ.11ರಂದು ಉಡುಪಿ ಮ್ಯಾರಥನ್ ಆಯೋಜಿಸಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನತೆ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದುಶ್ಚಟದಿಂದ ದೂರ ಉಳಿಯುತ್ತಾರೆ. ಜೊತೆಗೆ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಮ್ಯಾರಥನ್ ಆಯೋಜಿಸಲಾಗಿದೆ. 42 ಕಿಮೀ ಪೂರ್ಣ ಮ್ಯಾರಥನ್, 21 ಕಿಮೀ ಮ್ಯಾರಥನ್, 10 ಕಿಮಿ ಮತ್ತು 5 ಕಿಮೀ ಓಟ ನಡೆಯಲಿದೆ. ಎಲ್ಲಾ ವಿಭಾಗದಲ್ಲೂ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುವುದು. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಈ ಹಿಂದಿನ ಮ್ಯಾರಥನ್ ದಾಖಲೆ ಮುರಿದ ಸ್ಪರ್ಧಿಗಳಿಗೆ ತಲಾ 2.5 ಲಕ್ಷ ರೂ. ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಉಡುಪಿ ಜಿಲ್ಲೆ ಸಾಂಸತಿಕವಾಗಿ, ಪ್ರಾಕೃತಿಕವಾಗಿ ವಿಶಿಷ್ಟತೆ ಹೊಂದಿದ್ದು, ಮ್ಯಾರಥನ್ನಲ್ಲಿ ದೇಶವಿದೇಶಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಉಡುಪಿಗೆ ಆಗಮಿಸಲಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಮ್ಯಾರಥನ್ನಲ್ಲಿ ಭಾಗವಹಿಸುವ ನಿರೀೆ ಇದೆ. ಜಿಲ್ಲಾಡಳಿತ ಪ್ರತಿ ವರ್ಷ ಮ್ಯಾರಥನ್ ಆಯೋಜಿಸಲಾಗುವುದು ಎಂದು ಹೇಳಿದರು.
ಎಸ್ಪಿ ಹರಿರಾಂ ಶಂಕರ್, ಎನ್ಇಬಿ ಸಿಎಂಡಿ ನಾಗರಾಜ ಅಡಿಗ, ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್ ರೈ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.