ಕೇರಳದ ಮೀನುಗಾರಿಕಾ ಇಲಾಖೆ ವಶಕ್ಕೆ ಪಡೆದ ಉಡುಪಿ ಮಲ್ಪೆಯ ಎರಡು ಬೋಟ್​ಗಳು. 
ಉಡುಪಿ

ಮಲ್ಪೆಯ ಎರಡು ಬೋಟ್​ ವಶ; 6.11 ಲಕ್ಷ ರೂ. ದಂಡ

* ಕೇರಳ ಗಡಿ ದಾಟಿ ರಾತ್ರಿ ವೇಳೆ ಮೀನುಗಾರಿಕೆ

* ಮೀನುಗಾರಿಕಾ ಇಲಾಖೆಯಿಂದ ಕಾನೂನು ಕ್ರಮ

ಉಡುಪಿ: ಕೇರಳದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೆಂಬ ಕಾರಣದಿಂದಾಗಿ ಉಡುಪಿ ಮಲ್ಪೆಯ ಎರಡು ಮೀನುಗಾರಿಕಾ ಬೋಟ್​ಗಳನ್ನು ಕೇರಳ ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದೆ. ಅಲ್ಲದೆ, 6.11 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾಗಿ ತಿಳಿದು ಬಂದಿದೆ.

ಕಳೆದ ಗುರುವಾರ ರಾತ್ರಿ ಕೇರಳದ ಮೀನುಗಾರಿಕಾ ಇಲಾಖೆ ಹಾಗೂ ಮರೈನ್​ ಎನ್​ಫೋರ್ಸ್​ಮೆಂಟ್​ ಅಧಿಕಾರಿಗಳು ಜಂಟಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಪ್ಪಳ ಕರಾವಳಿಯಿಂದ 12 ನಾಟಿಕಲ್​ ಮೈಲ್​ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಎರಡು ಬೋಟ್​ಗಳನ್ನು ತಪಾಸಣೆ ನಡೆಸಿದರು. ಸೂಕ್ತ ದಾಖಲೆಗಳಿಲ್ಲದ್ದರಿಂದ ಹಾಗೂ ರಾತ್ರಿ ವೇಳೆ ಟ್ರಾಲಿಂಗ್​ ನಡೆಸುತ್ತಿರುವ ಆರೋಪದಡಿ ಬೋಟ್​ಗಳನ್ನು ವಶಪಡಿಸಿಕೊಂಡಿದ್ದರು.

ಬೋಟ್​ನಲ್ಲಿದ್ದ ಮೀನು ಹರಾಜು

ಬೋಟ್​ಗಳ ಮಾಲೀಕರ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳು ಕೇರಳ ಕಡಲ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಂಡರು. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸಿ.ಕೆ.ಶೈನಿ ಎಂಬವರು 5 ಲಕ್ಷ ರೂ. ದಂಡ ವಿಧಿಸಿದರು. ಅಲ್ಲದೆ, ಬೋಟ್​ನಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಅದರಿಂದ ಲಭಿಸಿದ 1.11 ಲಕ್ಷ ರೂ. ಸೇರಿ ಒಟ್ಟು 6.11 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾಗಿ ತಿಳಿದುಬಂದಿದೆ.