ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಅವರನ್ನು ಪುತ್ತಿಗೆ ಶ್ರೀಗಳು ಸನ್ಮಾನಿಸಿದರು.
ಉಡುಪಿ: ಪ್ರತಿಯೊಬ್ಬರು ಸಾಧಕರಾಗಬೇಕು ಎಂಬುದು ಗೀತೆಯ ಆಶಯ. ಪಲಾಯನವಾದಿಗಳನ್ನು ತಡೆದು ಸಾಧನೆಗೆ ಪ್ರೇರಣೆ ನೀಡುವುದು ಕೃಷ್ಣ ಉದ್ದೇಶ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ, ಕೃಷ್ಣ ಮಠದ ಆಶ್ರಯದಲ್ಲಿ 'ಗೀತಾ ಮಾಸೋತ್ಸವ'ದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಸಮಿತಿಯ ಸಹಯೋಗದೊಂದಿಗೆ ನಡೆದ 'ಗೀತಾ ಭಜನೋತ್ಸವ' ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಜೀವನದಲ್ಲಿ ದೇವರ ಅನುಗ್ರಹ ಪಡೆದು ಮುಂದೆ ಸಾಗಬೇಕು. ಜೀವನೋತ್ಸಾಹವಿಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಕೃಷ್ಣ ಅರ್ಜುನನಿಗೆ ನೀಡಿದ ಸಂದೇಶವೀ ಇದೇ ಆಗಿದೆ. ದೇವರು ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಗೀತಾ ಸಂದೇಶದ ಅನುಷ್ಠಾನಕ್ಕಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಮಾತನಾಡಿ, ದೇವಸ್ಥಾನಗಳು ವಾಣಿಜ್ಯ ಕೇಂದ್ರಗಳಾಗಿ ಬದಲಾಗುತ್ತಿರುವುದು ಖೇದಕರ. ದೇವರ ದರ್ಶನ ಪ್ರತಿ ಭಕ್ತನ ಅಧಿಕಾರ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವುದು ವ್ಯವಸ್ಥಾಪಕ ಕರ್ತವ್ಯ. ಈ ನಿಟ್ಟಿನಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ಸಾಮಾನ್ಯ ದರ್ಶನ ಹಾಗೂ ವಿಶೇಷ ದರ್ಶನಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದರು.
8 ಎಕ್ರೆ ಪ್ರದೇಶದಲ್ಲಿ ಪ್ರಾಕಾರ, 3 ಎಕ್ರೆ ಪ್ರದೇಶದಲ್ಲಿ ಪ್ರಾಚಿನ ನಾಗರ ಶೈಲಿಯ ಮುಖ್ಯ ಮಂದಿರ ನಿರ್ಮಾಣವಾಗಿದೆ. 200 ಮಂದಿ ಇಂಜಿನಿಯರ್ಗಳು ಮತ್ತು 5 ಸಾವಿರ ಮಂದಿ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. 5 ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಶತಮಾನದ ಇತಿಹಾಸದಲ್ಲಿ ಇಷ್ಟು ಭವ್ಯ ಮಂದಿರ ನಿರ್ಮಿಸಿರುವ ಉದಾಹರಣಿ ಇಲ್ಲ. ರಾಮಮಂದಿರ ಸ್ವಾಭಿಮಾನದ ಪ್ರತಿಕವಾಗಿದೆ. ರಾಷ್ಟ್ರ ಮಂದಿರವಾಗಿದೆ. 6 ಕೋಟಿ ಜನ ಹೋರಾಟ ಮಾಡಿ ಕಳೆದುಕೊಂಡದ್ದನ್ನು ಪಡೆದುಕೊಂಡಿದ್ದಾರೆ ಎಂದರು.
ಮಕ್ಕಳಿಗೆ ಪರಿಶ್ರಮದ ಬದುಕನ್ನು ಕಲಿಸಬೇಕು. ಹಿಂದೂ ಸಮಾಜದಲ್ಲಿ ಪರಿಶ್ರಮದ ಕೊರತೆ ಕಾಡುತ್ತಿದೆ. ದೊಡ್ಡ ಉದ್ಯೋಗ ಪಡೆಯುವಂತೆ ಮಾತ್ರ ಪ್ರೋತ್ಸಾಹ ನೀಡುತ್ತಿರುವುದರಿಂದ ಪಾರಂಪರಿಕ ಕಸುಬುಗಳು ಬೇರೆಯವರ ಪಾಲಾಗುತ್ತಿದೆ. ಪರಾಕ್ರಮ ಇಲ್ಲದಿದ್ದರೆ ಸಮೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಭೆಯಲ್ಲಿ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಕಾರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ವಿಹಿಂಪ ರಾಜ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ವಿದುಷಿ ಉಷಾ ಹೆಬ್ಬಾರ್, ಪ್ರಮುಖರಾದ ಸುಬ್ರಹ್ಮಣ್ಯ ಪ್ರಸಾದ್, ಆನಂದ ಸುವರ್ಣ, ಚಂದ್ರಶೇಖರ ಸಾಲ್ಯಾನ್, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.