ಯಶೋ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಜಿ. ಕುರ್ಯ. 
ಉಡುಪಿ

ಯಶೋ ಮಾಧ್ಯಮ ಪ್ರಶಸ್ತಿಗೆ ಸುಬ್ರಹ್ಮಣ್ಯ ಕುರ್ಯ ಆಯ್ಕೆ

* ಜೂ.15ರಂದು ಉಡುಪಿಯ ಕಲ್ಯಾಣಪುರದಲ್ಲಿ ಪ್ರದಾನ

ಉಡುಪಿ: ಬೆಂಗಳೂರು ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆ ವತಿಯಿಂದ ಪ್ರತಿವರ್ಷ ಓರ್ವ ಪತ್ರಕರ್ತನಿಗೆ ನೀಡುವ 'ಯಶೋ ಮಾಧ್ಯಮ' ಪ್ರಶಸ್ತಿಯನ್ನು ಈ ಬಾರಿ ಹಿರಿಯ ವರದಿಗಾರ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಖಜಾಂಚಿ ರಜನಿ ವಿ. ಪೈ ತಿಳಿಸಿದ್ದಾರೆ.
ಉಡುಪಿಯ ಕಲ್ಯಾಣಪುರದಲ್ಲಿ ಜೂ.15ರಂದು ಬೆಳಗ್ಗೆ 10 ಗಂಟೆಗೆ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಲಿದ್ದು, ಅಲ್ಲಿಯೇ ಪ್ರಶಸ್ತಿ ವಿತರಿಸಲಾಗುವುದು. ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಉದ್ಘಾಟಿಸಲಿದ್ದು, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಅಧ್ಯಕ್ಷತೆ ವಹಿಸಲಿದ್ದಾರೆ. 
ಪತ್ರಕರ್ತ ಜನಾರ್ದನ್​ ಕೊಡವೂರು, ಕಲ್ಯಾಣಪುರದ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮರಾಯ್​ ಕಿಣಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕಾರಂತ್​, ಉದ್ಯಾನವನ ವಿನ್ಯಾಸಗಾರ ಲೋಕೇಶ್​ ಪೂಜಾರಿ, ಮಣಿಪಾಲ ಕಾಲೇಜ್​ ಆಫ್​ ನರ್ಸಿಂಗ್​ನ ಸಹಾಯಕ ಪ್ರಾಧ್ಯಾಪಕ ಡಾ.ಮರಿಯಾ ಪಾಯಸ್​, ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ರಜನಿ ವಿ.ಪೈ, ಕಾರ್ಯದರ್ಶಿ ಸಂತೋಷ್​ ಕಾಮತ್​ ಪಾಲ್ಗೊಳ್ಳಲಿದ್ದಾರೆ.
ಕಲ್ಯಾಣಪುರ ವೆಂಕಟರಮಣ ದೇವಸ್ಥಾನಕ್ಕೆ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರಿಗೂ ಸ್ಪಂದನಾ ಸೇವಾ ಸಂಸ್ಥೆಯಿಂದ ಗೌರವಿಸಲಾಗುವುದು ಎಂದು ರಜನಿ ವಿ. ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.