ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿದರು.  
ಉಡುಪಿ

ಕೈಗಾರಿಕೆ ಸ್ಥಾಪನೆಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆ

ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯ, ಸಲಹೆಗಳನ್ನು ನೀಡಿ, ಉದ್ಯೋಗ ಅವಕಾಶಗಳು ಹೆಚ್ಚಿಸುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿಮಾರ್ಣ ಮಾಡಲು ಭೂ ಸ್ವಾಧಿನ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದರು.

ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ನಿವೇಶನ ಹಂಚಿಕೆಯನ್ನು ಮಾಡಿದ್ದರೂ ಸಹ ಕಳೆದ ಸಭೆಯಲ್ಲಿ 17 ನಿವೇಶನಗಳಲ್ಲಿ ಉದ್ದಿಮೆ ಪ್ರಾರಂಭಿಸಲು ಉದ್ದಿಮೆದಾರರಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ 5 ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರೆ, 9 ನಿವೇಶನಗಳಲ್ಲಿ ಕಟ್ಟಡಗಳ ನಿಮಾರ್ಣ ಹಂತದಲ್ಲಿರುತ್ತವೆ. ಬಾಕಿ ಉಳಿದ 3 ನಿವೇಶನದಲ್ಲಿ ಯಾವುದೇ ಪ್ರಗತಿ ಕಂಡುಬಂದಿರುವುದಿಲ್ಲ. ಈಗಾಗಲೇ 15ಕ್ಕೂ ಹೆಚ್ಚು ಜನರು ನಿವೇಶನ ಕೋರಿದ್ದಾರೆ. ನಿವೇಶನ ಪಡೆದು ಕೈಗಾರಿಕಾ ಘಟಕ ಸ್ಥಾಪಿಸದೇ ಇರುವ ನಿವೇಶನಗಳ ಮರು ಹಂಚಿಕೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಗಿ ವಿವಿಧ ಕೈಗಾರಿಕಾ ಘಟಕಗಳಲ್ಲಿ ಫಿಟ್ಟರ್​, ಎಲೆಕ್ಟ್ರಿಶಿಯನ್​, ವೆಲ್ಡರ್​, ಮೆಕ್ಯಾನಿಕಲ್​ ಸೇರಿದಂತೆ ಮತ್ತಿತರ 484 ಹುದ್ದೆಗಳು ಖಾಲಿ ಇರುವುದು ಕಂಡುಬಂದಿದೆ. ಖಾಲಿ ಹುದ್ದೆಗಳ ನೇಮಕಾತಿಗೆ ಸ್ಥಳಿಯ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್​ ವಿ. ನಾಯಕ್​, ಉಪನಿರ್ದೇಶಕ ಜಿ. ವಾಮನ ನಾಯ್ಕ್​, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಕಾಸಿಯಾ ಪ್ರತಿನಿಧಿ ಹರೀಶ್​ ಕುಂದರ್​ ಮತ್ತಿತರರು ಉಪಸ್ಥಿತರಿದ್ದರು.