ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ರಿಜ್ವಾನ್ ಅರ್ಷದ್ ಧ್ವಜಾರೋಹಣ ನೆರವೇರಿಸಿದರು. ಯಶ್ಪಾಲದ ಸುವರ್ಣ, ಮಂಜುನಾಥ್ ಭಂಡಾರಿ, ಎಂ.ಎ. ಗಫೂರ್, ಸ್ವರೂಪಾ ಟಿ.ಕೆ., ಪ್ರತೀಕ್ ಬಾಯಲ್, ಹರಿರಾಮ್ ಶಂಕರ್, ಅಶೋಕ್ ಕೊಡವೂರು, ದಿನಕರ್ ಹೇರೂರು ಇದ್ದರು.
* ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅಭಿಮತ
* ಉಡುಪಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
ಉಡುಪಿ: ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಅನೇಕ ಜಾತಿ, ಮತ, ಧರ್ಮ ಹಾಗೂ ವಿವಿಧ ಭಾಷೆಗಳಿದ್ದರೂ ನಾವೆಲ್ಲರೂ ಏಕತೆಯಿಂದ ಬದುಕುತ್ತಿದ್ದೇವೆ. ಇದೇ ಭಾರತದ ಸಾಮರಸ್ಯದ ಶಕ್ತಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟವರನ್ನು ಸ್ಮರಿಸಲೇಬೇಕು. ಭಾರತದ ಸಮಗ್ರತೆಗೆ, ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರ ಸಚಿವ ರಿಜ್ವಾನ್ ಅರ್ಷದ್ ಕರೆ ನೀಡಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ (ಆ.15) ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಜನತೆಗೆ ಸಂದೇಶ ನೀಡಿದರು.
ಪೊಲೀಸ್, ವಿವಿಧ ಇಲಾಖೆ ಹಾಗೂ ಶಾಲಾ-ಕಾಲೇಜು ತುಕಡಿಗಳಿಗೆ ಗೌರವ ವಂದನೆ ಸಲ್ಲಿಸಿದ ಸಚಿವ ರಿಜ್ವಾನ್ ಅರ್ಷದ್.
ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಎಲ್ಲವನ್ನೂ ಜನತೆಗೆ ತಲುಪಿಸುವ ಹೊಣೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿದೆ. ವಿದ್ಯಾರ್ಥಿಗಳಿಗೆ ಗ್ರಾಮಾನುಭವದ ಸೊಗಡು ಮೈಗೂಡಿಸಲು ಗ್ರಾಮೀಣ ಬದುಕಿನ ಅನುಭವ ನೀಡಲು ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಲು ಕಾರ್ಯಕ್ರಮ ಆಯೋಜಿಸುವುದಾಗಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್
ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳು ಜನರ ಆರ್ಥಿಕ ಮಟ್ಟವನ್ನು ಸುಧಾರಿಸುತ್ತಿವೆ. ಸಾರ್ವಜನಿಕರ ಕುಂದು&ಕೊರತೆ ಹಾಗೂ ಹೋರಾಟಗಳ ಮೂಲಕ ಸಲ್ಲಿಕೆಯಾಗುವ ಅಹವಾಲುಗಳನ್ನು ಪರಿಹರಿಸಲು 'ಪ್ರಜಾ ಸೇವಾ' ಇಲಾಖೆ ಆರಂಭಿಸಲಾಗಿದೆ. ಈ ವ್ಯವಸ್ಥೆ ಮೂಲಕ ಜನರಿಗಿರುವ ಸಂಕಷ್ಟಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರಾಜ್ಯದಲ್ಲಿ ಬರಗಾಲದ ಛಾಯೆ
ಧ್ವಜಾರೋಹಣ ನೆರವೇರಿಸಿದ ಸಚಿವ ರಿಜ್ವಾನ್ ಅರ್ಷದ್ ಸ್ವಾತಂತ್ರ್ಯೋತ್ಸವ
ರಾಜ್ಯಾದ್ಯಂತ ಮಳೆ ಕೊರತೆಯಿಂದಾಗಿ ಬರಗಾಲ ಛಾಯೆ ಆವರಿಸಿದೆ. ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.29ರಷ್ಟು ಕೊರತೆಯಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ಸಂರಕ್ಷಣೆ, ಜಾನುವಾರುಗಳಿಗೆ ಮೇವು ಒದಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಅತಿವೃಷ್ಟಿಯಿಂದಾಗಿ ಹಾನಿ ಅನುಭವಿಸಿದವರಿಗೆ 40 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮಾದಕ ದ್ರವ್ಯಗಳ ಸೇವನೆಯು ಯುವ ಜನತೆಯ ಸಾಮರ್ಥ್ಯ, ಆರ್ಥಿಕತೆ ಮತ್ತು ಸಮಾಜದ ನಾಶಕ್ಕೆ ಕಾರಣವಾಗುತ್ತದೆ. ಹೀಗಾಗಿ ವ್ಯಸನಮುಕ್ತ ಸಮಾಜ ನಿರ್ಮಿಸಲು ಸರ್ಕಾರ ಬದ್ಧವಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಯ ಕ್ಯೂಆರ್ ಕೋಡ್ ಮೂಲಕ ಮಾಹಿತಿ ನೀಡಬೇಕು ಎಂದರು.
ಜನತೆಗೆ ಗ್ಯಾರಂಟಿ ಸಹಿತ ವಿವಿಧ ಸೌಲಭ್ಯ
ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ, ಮೀನುಗಾರಿಕಾ ಅಭಿವೃದ್ಧಿಗಾಗಿ ಉಚಿತವಾಗಿ ನೀಡುವ ಸಲಕರಣೆಗಳ ಮೂಲದರವನ್ನು 10 ಸಾವಿರದಿಂದ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆ ಮೂಲಕ ಜಿಲ್ಲಾದ್ಯಂತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಡುಪಿ ನಗರಕ್ಕೆ ದಿನದ 24 ಗಂಟೆ ನೀರು ಪೂರೈಕೆಗೆ ವರಾಹಿ ಯೋಜನೆ ಕಾಮಗಾರಿ ನಡೆದಿದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಗಳ ಬಲವರ್ಧನೆಗೆ ಸಹಕಾರ ನೀಡಲಾಗುತ್ತಿದೆ. ತೋಟಗಾರಿಕೆ, ಕೃಷಿ, ಯುವ ಸಬಲೀಕರಣ ಇಲಾಖೆಯ ಮೂಲಕ ವಿವಿಧ ಯೋಜನೆ ಜಾರಿ ಮಾಡಲಾಗಿದೆ. 'ಯುವ ಕರ್ನಾಟಕ-ನವ ಭಾರತ' ಘೋಷವಾಕ್ಯದಡಿ 'ಭಾರತ ಜೋಡೋ' ಯುವ ಸಂಘ ರಚಿಸಲಾಗುತ್ತಿದೆ. ಆರೋಗ್ಯ ಇಲಅಖೆಯಲ್ಲಿ ವೈದ್ಯರ ಕೊರತೆ ನೀಗಿಸಲು ಸಾವಿರಕ್ಕೂ ಅಧಿಕ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಕ್ರಮ ಕೈಗೊಳಲಾಗಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್, ಎಂಎಲ್ಸಿ ಮಂಜುನಾಥ್ ಭಂಡಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರು, ಶ್ರೀನಾರಾಯಣ ಗುರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ್, ಜಿಪಂ ಸಿಇಒ ಪ್ರತಿಕ್ ಬಾಯಲ್, ಕಅಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಅಜ್ಜರಕಾಡು ಕ್ರೀಡಾಂಗಣದ ಬಳಿ ಬಾಸ್ಕೆಟ್ ಬಾಲ್ ಗ್ರೌಂಡ್ ಶಂಕುಸ್ಥಾಪನೆ ನೆರವೇರಿಸಿ, ಅಜ್ಜರಕಾಡು ಕ್ರೀಡಾಂಗಣದ ಮೇಲ್ಛಾವಣಿ ಕಾಮಗಾರಿ ಉದ್ಘಾಟಿಸಿದ ಸಚಿವ ರಿಜ್ವಾನ್ ಅರ್ಷದ್.
ಗಾಯಕಿ ಕಲಾವತಿ ದಯಾನಂದ್ ಮತ್ತು ತಂಡದವರು ವಂದೇ ಮಾತರಂ ಗೀತೆ, ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿದರು. ಜಿಲ್ಲಾ ಪೊಲೀಸ್ ಬ್ಯಾಂಡ್ನವರು ರಾಷ್ಟ್ರಗೀತೆ ನುಡಿಸಿದರು. ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಶೆಟ್ಟಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ಇಲಾಖೆ ಹಾಗೂ ಶಾಲಾ-ಕಾಲೇಜುಗಳ 24 ತುಕಡಿಗಳಿಂದ ಸಚಿವ ರಿಜ್ವಾನ್ ಗೌರವ ವಂದನೆ ಸ್ವೀಕರಿಸಿದರು. ಸ್ವಾತಂತ್ರ್ಯೋತ್ಸವದ ನಿಮಿತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ವಚ್ಛತೆಯಲ್ಲಿ ಜನರ ಕರ್ತವ್ಯದ ಕುರಿತಾಗಿ ಪ್ರದರ್ಶಿಸಿದ ಜಾಗೃತಿ ನೃತ್ಯಗಳು ಗಮನ ಸೆಳೆದವು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತುಳುನಾಡಿನ ಸಮಸ್ತ ಸಂಸ್ಕೃತಿಯನ್ನು ನೃತ್ಯದ ಮೂಲಕ ಪ್ರದರ್ಶಿಸಿದ ಆದಿಉಡುಪಿಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಪ್ರಥಮ ಸ್ಥಾನ ಗಳಿಸಿತು. ಉದ್ಯಾವರದ ಸೈಂಟ್ ಕ್ಷೇವಿಯರ್ ಹೈಸ್ಕೂಲ್ ದ್ವಿತೀಯ, ಒಳಕಾಡು ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿತು. ಸೇಂಟ್ ಸಿಸಿಲೀಸ್ ಪ್ರೌಢಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜ್ ಉಡುಪಿ ಸಮಾಧಾನಕರ ಬಹುಮಾನ ಪಡೆಯಿತು.
ಮ್ಯಾಸ್ಕಾಟ್ ಸ್ಪರ್ಧಾ ವಿಜೇತರಿಗೆ ಬಹುಮಾನ
ಅಜ್ಜರಕಾಡುನಲ್ಲಿರುವ ಹುತಾತ್ಮ ಸ್ಮಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ಗೌರವ ನಮನ ಸಲ್ಲಿಸಿದರು.
ಸಚಿವ ರಿಜ್ವಾನ್ ಬೆಳಗ್ಗೆ 7:30ಕ್ಕೆ ಸರ್ವೀಸ್ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಾಗೂ 8 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. 8:30ಕ್ಕೆ ಅಜ್ಜರಕಾಡು ಕ್ರೀಡಾಂಗಣ ಸಮೀಪದ ಹುತಾತ್ಮಕ ಸ್ಮಾರಕಕ್ಕೆ ಆಗಮಿಸಿ, ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.ಬಳಿಕ ಅಜ್ಜರಕಾಡು ಕ್ರೀಡಾಂಗಣದ ಬಳಿ ಬಾಸ್ಕೆಟ್ ಬಾಲ್ ಗ್ರೌಂಡ್ ಶಂಕುಸ್ಥಾಪನೆ ನೆರವೇರಿಸಿ, ಅಜ್ಜರಕಾಡು ಕ್ರೀಡಾಂಗಣದ ಮೇಲ್ಛಾವಣಿ ಕಾಮಗಾರಿ ಉದ್ಘಾಟಿಸಿದರು. ಮಧ್ಯಾಹ್ನ 12 ಗಂಟೆಗೆ ಎಲ್ಐಸಿ ಕಟ್ಟಡದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಬಳಿಕ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಪಂ ವತಿಯಿಂದ ಉಡುಪಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಇಲ್ಲು ಫುಡ್ಸ್ ಮಸಾಲಾ ಪೌಡರ್ ಘಟಕ ಹಾಗೂ ಬ್ರಹ್ಮಗಿರಿಯ ನಾಯರ್ಕೆರೆ ರಸ್ತೆಯ ಬಳಿ ಜಿಪಂ ವತಿಯಿಂದ ಆರಂಭಿಸಿರುವ ಅಕ್ಕ ಕೆಫೆ ಉದ್ಘಾಟಿಸಿದರು.