ಪ್ರಶಾಂತ ಭಾಗ್ವತ ಉಡುಪಿ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಉಡುಪಿ ಜಿಲ್ಲೆಯಲ್ಲಿ ಪರಿಣಾಮಾಕಾರಿಯಾಗಿ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಇದೀಗ ರಾಜ್ಯದಲ್ಲಿಯೇ ಸಂಪೂರ್ಣ ಸಾಕ್ಷರತೆ ಹೊಂದಿದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಗೆ ಮತ್ತೊಂದು ಗರಿ ಲಭಿಸಿದ್ದು, ವಯಸ್ಕರ ಶಿಕ್ಷಣದಲ್ಲಿ ಶೇ.99.52 ಮಾನದಂಡದೊಂದಿಗೆ ಸಂಪೂರ್ಣ ಸಾಕ್ಷರತೆ ಹೊಂದಿದ ಜಿಲ್ಲೆ ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪರಿಣಾಮಕಾರಿ ಬೋಧನೆ
ರಾಜ್ಯದಲ್ಲಿ ಕೇಂದ್ರ ಪುರಸತ ಉಲ್ಲಾಸ ಕಾರ್ಯಕ್ರಮ ಹಾಗೂ ರಾಜ್ಯ ಯೋಜನೆಯಾದ 1,000 ಗ್ರಾಮ ಪಂಚಾಯಿತಿ ಕಾರ್ಯಕ್ರಮ ಮತ್ತು ಜಿಲ್ಲಾ ಹಂತದಲ್ಲಿ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕಳೆದ 4 ವರ್ಷದಿಂದ ವಿವಿಧ ಕಾರ್ಯಯೋಜನೆ ಕೈಗೊಳ್ಳಲಾಗಿತ್ತು. ಇದರಲ್ಲಿ ಉಡುಪಿ ಜಿಲ್ಲೆಯ ಎಲ್ಲ 155 ಗ್ರಾಪಂ, 7 ತಾಪಂ ಮತ್ತು 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಸಾಕ್ಷರತಾ ತರಬೇತಿ ಶಿಬಿರಗಳ ಮೂಲಕ ವಯಸ್ಕರಿಗೆ ಶಿಕ್ಷಣ ಒದಗಿಸಲಾಗಿತ್ತು.
ಸರ್ಕಾರಕ್ಕೆ ಪ್ರಸ್ತಾವನೆ
ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಎಲ್ಲ ಗ್ರಾಪಂ, ತಾಪಂ ಮತ್ತು ನಗರ ಸ್ಥಳಿಯ ಸಂಸ್ಥೆಗಳಲ್ಲಿ ಸಾಕ್ಷರತೆಯ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಸಂಪೂರ್ಣ ದೃಢೀಕರಣವನ್ನೂ ಪಡೆಯಲಾಗಿದೆ. ಶೇ.95ಕ್ಕಿಂತ ಹೆಚ್ಚು ಸಾಕ್ಷರರನ್ನು ಹೊಂದಿದ್ದರೆ ಮಾನದಂಡದಂತೆ ಸಂಪೂರ್ಣ ಸಾಕ್ಷರ ಜಿಲ್ಲೆಯನ್ನಾಗಿ ಘೋಷಿಸಲು ಅವಕಾಶವಿದೆ. ಆದರೆ, ಜಿಲ್ಲೆಯಲ್ಲಿ ಶೇ.99.52 ಸಾಧನೆ ಮಾಡಲಾಗಿದ್ದು ಜಿಲ್ಲೆಯನ್ನು ಸಾಕ್ಷರ ಜಿಲ್ಲೆ ಎಂದು ಘೋಷಿಸುವಂತೆ ಜಿಪಂ ಸಿಇಒ ಪ್ರತೀಕ್ ಬಾಯಲ್ ಅವರು ಸರ್ಕಾರಕ್ಕೆ ಎಲ್ಲ ಅಂಕಿ-ಅಂಶ ಹಾಗೂ ದಾಖಲೆಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದರು.
ಘೋಷಣೆಗೆ ಅನುಮತಿ
ಉಡುಪಿ ಜಿಪಂ ಸಿಇಒ ನೀಡಿರುವ ಎಲ್ಲ ದಾಖಲಾತಿಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಶುಭಮಂಗಳಾ ಆರ್.ವಿ. ಪರಿಶೀಲಿಸಿ ಪುರಸ್ಕರಿಸಿದ್ದಾರೆ. ಅಲ್ಲದೆ, ಕೆಲವು ಷರತ್ತು, ನಿಬಂಧನೆಯೊಂದಿಗೆ ಉಡುಪಿಯನ್ನು ಸಾಕ್ಷರತಾ ಜಿಲ್ಲೆ ಎಂದು ಘೋಷಿಸಲು ಜಿಪಂಗೆ ಆದೇಶಿಸಿ ಅನುಮತಿ ನೀಡಿದ್ದಾರೆ.
ಶೈಕ್ಷಣಿಕ ಕಾಶಿ ಖ್ಯಾತಿಯ ಉಡುಪಿ ಜಿಲ್ಲೆ ಇದೀಗ ಸಾಕ್ಷರತೆಯಲ್ಲೂ ಸಹ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ. ವಯಸ್ಕ ಶಿಕ್ಷಣವನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅನಕ್ಷರಸ್ಥರಿಗೆ ಅಗತ್ಯ ಹಾಗೂ ಮೂಲ ಶಿಕ್ಷಣ ಒದಗಿಸಿದ್ದೇವೆ. ಸಾಕ್ಷರರಾದ ಅವರಿಗೆ ಜೀವನೋಪಾಯಕ್ಕಾಗಿ ವಿವಿಧ ಕೌಶಲ ತರಬೇತಿಯನ್ನೂ ಸಹ ಮುಂದುವರಿದ ಶಿಕ್ಷಣವಾಗಿ ನೀಡುತ್ತಿದ್ದೇವೆ.ಪ್ರತೀಕ್ ಬಾಯಲ್. ಉಡುಪಿ ಜಿಪಂ ಸಿಇಒ.
ಕಾರ್ಯಕ್ರಮ- ವರ್ಷ- ಗ್ರಾಪಂ ಸಂಖ್ಯೆ- ಸಾಕ್ಷರರ ಸಂಖ್ಯೆ
ಸಾವಿರ ಗ್ರಾಪಂ- 2022-23- 77- 3,500
ಸಾವಿರ ಗ್ರಾಪಂ- 2023-24- 16- 834
ಎನ್ಬಿಎಸ್ಕೆ- 2023-24- (ನಗರ, ಪುರಸಭೆ, ಪಪಂ)- 674
ಎನ್ಬಿಎಸ್ಕೆ- 2025-26 (ನಗರ, ಪುರಸಭೆ, ಪಪಂ)- 389
ಎಲ್ಡಿ- 2022-23- 1- 46
ಎಲ್ಡಿ- 2023-24- 1- 46
ಎಲ್ಡಿ- 2024-25- 1- 46
ಎಲ್ಡಿ- 2025-26 3- 350
ಶೇ.95 ಹೆಚ್ಚು- ಸ್ವಾಭಾವಿಕ- 56- --
ಒಟ್ಟು- 4 ವರ್ಷ- 155- 5,885
ನವ ಸಾಕ್ಷರರಾದ ವಯಸ್ಕರು ಸಾಕ್ಷರತೆಯೊಂದಿಗೆ ಸ್ವಾವಲಂಬನೆ ಹೊಂದುವಂತಾಗಲು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ವತಿಯಿಂದ ಅನೇಕ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ವಿವಿಧೆಡೆ ಕಾರ್ಯಾಗಾರ ನಡೆಸುತ್ತಿದ್ದೇವೆ. ಎಂಬ್ರಾಯ್ಡರಿ ಹೊಲಿಗೆ, ಹಿಂದುಳಿದ ಪ್ರದೇಶಗಳ ಮಹಿಳೆಯರಿಗೆ ವೃತ್ತಿ ಕೌಶಲಗಳ ತರಬೇತಿ ನೀಡಿದ್ದೇವೆ. ಇಲಾಖೆಯನ್ನು ಬಹುಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ.ಯೋಗಾನರಸಿಂಹ ಸ್ವಾಮಿ ಕೆ.ಎಂ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ.