ಉಡುಪಿಯ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ಧಾರ್ಮಿಕ ಮುಖಂಡ ಮಹೇಶ್ ಠಾಕೂರ್ ಇದ್ದರು.
* ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ಮಾಜಿ ಶಾಸಕನ ಪ್ರತಿಭಟನೆ
* ಸಿಂಗಲ್ ಲೇ-ಔಟ್ ಅನುಮತಿಗಾಗಿ ಹೋರಾಟ
ಉಡುಪಿ: ನನ್ನ ಜಾಗಕ್ಕೆ ಸಂಬಂಧಿಸಿ ಏಕವಿನ್ಯಾಸ (ಸಿಂಗಲ್ ಲೇ-ಔಟ್)ನೆ ನೀಡುವಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ 2 ವರ್ಷವಾಗಿದ್ದರೂ ಅನುಮತಿ ನೀಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಾ.23ರಿಂದ ಬೆಳಗ್ಗೆ 9:30ರಿಂದ ಸಂಜೆ 6 ಗಂಟೆಯವರೆಗೆ ಪ್ರತಿದಿನವೂ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮುಂದೆ ಏಕಾಂಗಿಯಾಗಿ ಧರಣಿ ನಡೆಸಲಿದ್ದೇನೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಉಡುಪಿಯ ನಿವಾಸದಲ್ಲಿ ಶನಿವಾರ (ಮಾ.21) ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಸರ್ವೆ ನಂ. 118/2ಎ1ಎ3 ಮತ್ತು 118/2ಬಿ ಯಲ್ಲಿ 0.90 ಎಕರೆ ಜಾಗದ ಸಿಂಗಲ್ ಲೇ-ಔಟ್ಗಾಗಿ 2024ರ ಮಾ.20ರಂದು ಅರ್ಜಿ ಸಲ್ಲಿಸಿದ್ದೆ. 24 ತಿಂಗಳು ಕಳೆದರೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿಲ್ಲ. ಹೀಗಾಗಿ ಶಾಂತಿಯುತ ಹೋರಾಟ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿದರು.
ನಾನೊಬ್ಬ ಉದ್ಯಮಿ
ರಾಜಕಾರಣಿಗಿಂತಲೂ ಮೊದಲು ನಾನೊಬ್ಬ ಉದ್ಯಮಿ. 1990ರಿಂದಲೂ ನಾನು ಹೋಟೆಲ್ ಉದ್ಯಮಿಯಾಗಿದ್ದು ಇದು ನನ್ನ ವೃತ್ತಿಯಾಗಿದೆ. ರಾಜಕೀಯ ನನ್ನ ಪ್ರವೃತ್ತಿಯಾಗಿದೆ. ಮೂರು ಬಾರಿ ಉಡುಪಿಯ ಶಾಸಕನಾಗಿ ಆಯ್ಕೆಯಾಗಿದ್ದು, ನನ್ನ ವೈಯಕ್ತಿಕ ಜಾಗಕ್ಕೆ ಸಂಬಂಧಿಸಿ ಸಿಂಗಲ್ ಲೇಔಟ್ ಅನುಮತಿ ಸಿಗುತ್ತಿಲ್ಲ. ಇನ್ನು ಸಾಮಾನ್ಯ ಜನರ ಪಾಡೇನು? ಉಡುಪಿಯಲ್ಲಿ ನ್ಯಾಯ ಇಲ್ಲವೇ? ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಡೋಂಟ್ ಕ್ಯಾರ್ ಸಂಸ್ಕೃತಿ
ನನ್ನ ಜಾಗಕ್ಕೆ ಸಿಆರ್ಝಡ್ನಿಂದ, ಕೆಎಸ್ಝಡ್ಇಎಂನಿಂದಲೂ ಸಹ ಕ್ಲಿಯರೆನ್ಸ್ ಲಭಿಸಿದೆ. ನನ್ನ ಜಾಗದಲ್ಲಿ ಕಾಂಪೌಂಡ್ ಸಹ ಹಾಕಿಲ್ಲ. ಆದರೂ ಅಕ್ರಮ ರೆಸಾರ್ಟ್ ಕಟ್ಟಲಾಗುತ್ತಿದೆ ಎಂದು ದೂರು ನೀಡಲಾಗಿದೆ. ಇದಕ್ಕಾಗಿ ಎಡಿಸಿ ನೇತೃತ್ವದಲ್ಲಿ ಐದು ಕೆಎಎಸ್ ಅಧಿಕಾರಿಗಳ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ತಹಸೀಲ್ದಾರರು ಎಡಿಸಿ ಸಮಿತಿಗೆ ವರದಿ ಸಲ್ಲಿಸಿದ್ದಾರೆ. ಹೈಕೋರ್ಟ್ನಿಂದಲೂ 30 ದಿನದಲ್ಲಿ ಸಿಂಗಲ್ ಲೇಔಟ್ ನೀಡಲು ನಿರ್ದೇಶನ ಬಂದಿದೆ. ಕಳೆದ ಫೆ.20ರಂದು ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ, ಜ.14ರಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದಲೂ ನಿರ್ದೇಶನ ಬಂದಿದೆ. ಆದರೂ ಉಡುಪಿಯ ಆಯುಕ್ತರು ಕ್ಯಾರೇ ಮಾಡುತ್ತಿಲ್ಲ. ಉಡುಪಿಯಲ್ಲಿ ಸ್ಥಳೀಯ ಶಾಸಕ ಹಾಗೂ ನಗರಾಭಿವೃದ್ಧಿ ಆಯುಕ್ತರೇ ಸುಪ್ರೀಂ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಧಾರ್ಮಿಕ ಮುಖಂಡ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ನನಗಿಲ್ಲ ಯಾವುದೇ ಸ್ವಹಿತಾಸಕ್ತಿ, ದುರುದ್ದೇಶ
ಸ್ಥಳೀಯ ಶಾಸಕರು 2024ರ ಮಾ.7ರಂದು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದು, ತನಿಖೆಯೂ ನಡೆದು ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಬೀತಾಗಿದೆ. ಹೀಗಾಗಿ ಕಾನೂನಿನಂತೆ ನನಗೆ ಸಿಂಗಲ್ ಲೇ-ಔಟ್ ಕೊಡಲಿ. ಅಥವಾ ಯಾಕೆ ಕೊಡಲು ಸಾಧ್ಯವಿಲ್ಲ ಎಂದು ಹಿಂಬರಹವನ್ನಾದರೂ ನೀಡಲಿ. ಅಲ್ಲಿಯವರೆಗೆ ನಾನು ಧರಣಿ ಮುಂದುವರಿಸುತ್ತೇನೆ.