ಉಡುಪಿ ಪೊಲೀಸರ ವಶದಲ್ಲಿರುವ ಜೀವ ಬೆದರಿಕೆ ಹಾಕಿದ್ದ ಆರೋಪಿಗಳು.
* ಎರಡು ತಿಂಗಳ ಹಿಂದೆ ನಡೆದಿದ್ದ ಪ್ರಕರಣ
ಉಡುಪಿ: ಬಾಕಿ ಕೊಡಬೇಕಾದ 5 ಲಕ್ಷ ರೂ. ಕೊಡುವಂತೆ ಮೊಬೈಲ್ ಕರೆ ಮೂಲಕ ಉಡುಪಿಯ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಶಿವಳ್ಳಿ ಗ್ರಾಮದ ಪೆರಂಪಳ್ಳಿ ರಸ್ತೆ ಮಾರ್ಗದಲ್ಲಿರುವ ಜಾನ್ ಆರ್ಕ್ ಅಪಾರ್ಟ್ಮೆಂಟ್ ನಿವಾಸಿ ಸಾಜೀದ್ ಅಬ್ದುಲ್ ಶುಕೂರ್ (35), ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಪನಳ್ಳಿ ಸಮೀಪದ ಹುತ್ರಿದುರ್ಗಾ ಹೋಬಳಿಯ ಸೈಯದ್ ಸೈಫ್ ಅಹಮ್ಮದ್ (40) ಬಂಧಿತರು.
ಘಟನೆಯ ವಿವರ
ಕಳೆದ ಜು.2ರಂದು ಸಂಜೆ 6:30ಕ್ಕೆ ವಾಟ್ಸಾಪ್ ಕರೆ ಬಂದಿದ್ದು, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೋರ್ವ, ನೀವು ಅಜಿತ್ ಪಡಿಯಾರ್ ಅವರ ತಂದೆಯಾ? ಆತ ನಮ್ಮ ಬಳಿ ವಜ್ರದ ವ್ಯವಹಾರ ಮಾಡಿದ್ದು ಬಾಕಿ 5 ಲಕ್ಷ ರೂ. ಇನ್ನೂ ಕೊಟ್ಟಿಲ್ಲ. ಅದನ್ನು ನೀವು ಕೊಡಬೇಕು ಎಂದು ಬೆದರಿಸಿದ್ದಾನೆ. ಇದಕ್ಕೆ ಅಜಿತ್ ತಂದೆ ಅಶೋಕ್ ಪ್ರತಿಕ್ರಿಯಿಸಿ, ನನ್ನ ಮಗ ಎಂಟು ವರ್ಷದ ಹಿಂದೆಯೇ ಮೃತಪಟ್ಟಿದ್ದಾನೆ. ಆತ ಒಮ್ಮೆಯೂ ನಮಗೆ ವಜ್ರದ ವ್ಯವಹಾರದ ಕುರಿತು ತಿಳಿಸಿಲ್ಲ. ಹೀಗಾಗಿ ನಾನು ಹಣ ಕೊಡಲು ಆಗುವುದಿಲ್ಲ ಎಂದಿದ್ದರು.
ಅದೇ ದಿನ ಬೆಳಗ್ಗೆ ಆ ವ್ಯಕ್ತಿ ದುಬಾಯಿಯಲ್ಲಿರುವ ಸಜಿತ್ನ ಸಹೋದರ ಅಮೀತ್ ಅವರಿಗೆ ಮೊಬೈಲ್ ಪೋನ್ ಕರೆ ಮಾಡಿ, ನಿನ್ನ ಅಣ್ಣ ಅಜಿತ್ ನನಗೆ ಕೊಡಬೇಕಾದ ಬಾಕಿ 5 ಲಕ್ಷ ರೂ. ನೀನು ಕೊಡಬೇಕು. ಇಲ್ಲದಿದ್ದರೆ ಊರಿನಲ್ಲಿರುವ ನಿನ್ನ ಪತ್ನಿಗೆ ತೊಂದರೆ ನೀಡುವುದಾಗಿ ಬೆದರಿಸಿದ್ದನು. ಈ ವಿಚಾರವಾಗಿ ಅಶೋಕ್ ಪಡಿಯಾರ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಪತ್ತೆಗೆ ಉಡುಪಿ ನಗರ ಪೊಲೀಸ್ ನಿರೀಕ್ಷಕ ಮಹೇಶಪ್ರಸಾದ್ ಪಿ. ಮಾರ್ಗದರ್ಶನದಲ್ಲಿ ಎಸ್ಐ ರತ್ನಾಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿ ಸೈಯದ್ ಸೈಫ್ ಅಹಮ್ಮದ್ನನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.