ಉಡುಪಿ ಜಿಲ್ಲೆ ಮೂಲದ ಬಹುಭಾಷಾ ಗಾಯಕಿ ಸುಮನ್ ಕಲ್ಯಾಣಪುರ್.
* ಕುಂದಾಪುರದ ಹೆಮ್ಮಾಡಿ ಮೂಲದ ಪ್ರತಿಭೆ
* ಮುಂಬಯಿಯಲ್ಲಿ ಅಂತ್ಯಸಂಸ್ಕಾರ
ಉಡುಪಿ: ಸುಮಧುರ ಕಂಠ ಹಾಗೂ ಜನಪ್ರಿಯ ಹಾಡುಗಳಿಂದಲೇ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಬಹುಭಾಷಾ ಗಾಯಕಿ ಸುಮನ್ ಕಲ್ಯಾಣಪುರ್ (89) ಭಾನುವಾರ (ಮೇ 31) ರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮುಂಬಯಿಯ ಲೋಖಂಡವಾಲಾ ಪ್ರದೇಶದ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪುತ್ರಿ ಚಾರುಲ್ ಅಗ್ನಿ ಇದ್ದು, ವಿದೇಶದಲ್ಲಿ ನೆಲೆಸಿದ್ದಾರೆ.
ಸುಮನ್ ಅವರ ತಂದೆ ಶಂಕರ್ ರಾವ್ ಹೆಮ್ಮಾಡಿ ಅವರು ಮೂಲತ; ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದವರಾಗಿದ್ದರು. ಅವರು ಸುದೀರ್ಘ ಅವಧಿಗೆ ಢಾಕಾದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದು, ಪತ್ನಿ ಸೀತಾ ಅವರೊಂದಿಗೆ ನೆಲೆಸಿದ್ದರು. ದಂಪತಿಗೆ ಐದು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನಿದ್ದು, ಸುಮನ್ ಹಿರಿಯ ಮಗಳಾಗಿದ್ದಳು.
ಸ್ವಾತಂತ್ರ್ಯ ಪೂರ್ವದಲ್ಲೇ (1943) ಹೆತ್ತವರು ಮುಂಬಯಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೇ ಸುಮನ್ ಅವರು ಸಂಗೀತ ಕಲಿತಿದ್ದರು.
1958ರಲ್ಲಿ ಮುಂಬಯಿ ಮೂಲದ ಉದ್ಯಮಿ ರಮಾನಂದ ಕಲ್ಯಾಣಪುರ್ ಅವರನ್ನು ವಿವಾಹವಾದರು. ಬಳಿಕ ಸುಮನ್ ಹೆಮ್ಮಾಡಿ ಅವರು ಸುಮನ್ ಕಲ್ಯಾಣಪುರ್ ಎಂದೇ ಚಿರಪರಿಚಿತರಾದರು.
ಲತಾ ಧ್ವನಿಗೆ ಹೋಲಿಕೆ ನಿರಾಕರಣೆ
1960 ಮತ್ತು 1970ರ ದಶಕದಲ್ಲಿ ತಮ್ಮ ಮಧುರ ಗೀತೆಗಳಿಂದ ಮನಸೆಳೆದಿದ್ದ ಸಮನ್ ಕಲ್ಯಾಣಪುರ್, ಅಂದಿನ ಮೇರುಗಾಯಕಿ ಲತಾ ಮಂಗೇಶ್ವರ್ ಪ್ರಭಾವದ ನಡುವೆಯೂ ಗಾಯನ ಶೈಲಿಯಲ್ಲಿ ತಮ್ಮದೇ ಸ್ವಂತಿಕೆ ರೂಪಿಸಿಕೊಂಡಿದ್ದರು. ಸುಮನ್ ಅವರ ಧ್ವನಿಯೂ ಸಹ ಲತಾ ಮಂಗೇಶ್ವರ್ ಅವರಂತೆಯೂ ಇತ್ತು. ಆದರೆ, ಸಂದರ್ಶನವೊಂದರಲ್ಲಿ ಈ ಸಂಗತಿಯನ್ನು ಸುಮನ್ ನಿರಾಕರಿಸಿದ್ದರು.
ಹಿಂದಿ, ಕನ್ನಡ, ಮರಾಠಿ, ಅಸ್ಸಾಮಿ, ಬಂಗಾಳಿ, ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ಭಕ್ತೀಗಿತೆ, ಗಜಲ್ ಹೀಗೆ ಹಲವು ಪ್ರಕಾರದ ಹಾಡುಗಾರಿಕೆಯಲ್ಲಿ ಹೆಸರು ಮಾಡಿದ್ದರು. ಸೋಮವಾರ ಮಧ್ಯಾಹ್ನ ಮುಂಬಯಿಯ ಪವನ್ ಹನ್ಸ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿತು.