ಉಡುಪಿಯ ಪತ್ರಿಕಾ ಭವನದಲ್ಲಿ ವೆಂಕಟರಮಣ ಆರ್. ಐತಾಳ್ ಮಾತನಾಡಿದರು. ಡಾ. ಗಣನಾಥ ಶೆಟ್ಟಿ ಎಕ್ಕಾರು, ಪೂರ್ಣಿಮಾ ಇದ್ದರು.
* ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್ ಮಾಹಿತಿ
* ಆಗಸ್ಟ್ನಲ್ಲಿ ರೆಪರ್ಟರಿ ತಂಡ ಪ್ರದರ್ಶನಕ್ಕೆ ಸಿದ್ಧ
ಉಡುಪಿ: ಯಕ್ಷ ರಂಗಾಯಣ ಕಾರ್ಕಳದ ಹೆಸರು ಬದಲಾವಣೆಯಾಗಿದ್ದು, 'ಕರಾವಳಿ ರಂಗಾಯಣ ಕಾರ್ಕಳ' ಎಂಬ ಹೊಸ ನಾಮಕರಣದೊಂದಿಗೆ ಎಲ್ಲ ಬಗೆಯ ರಂಗ ಚಟುವಟಿಕೆ ನಡೆಯಲಿದೆ. ಜುಲೈ ತಿಂಗಳಲ್ಲಿ ಕಲಾವಿದರ ಸಂದರ್ಶನ ನಡೆಸಿ, ರೆಪರ್ಟರಿ ತಂಡ ರಚಿಸಿ ಆಗಸ್ಟ್ ತಿಂಗಳಲ್ಲಿ ನಾಟಕ ಪ್ರದರ್ಶನ ನಡೆಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ವೆಂಕಟರಮಣ ಆರ್. ಐತಾಳ್ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ (ಜೂ.22) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.15ರಂದು 'ಜೋಗೇರ ಆಟ' ಕಲೆ ಪ್ರದರ್ಶನ, ಬಿ.ವಿ. ಕಾರಂತ ಅವರ ಜನ್ಮದಿನದ ನಿಮಿತ್ತ ನ.19ರಂದು 'ಕಥಾ ಪ್ರಸ್ತುತಿ' ಕಿರುನಾಟಕ, ನವೆಂಬರ್ನಲ್ಲಿ ತಾಳಮದ್ದಲೆ ನಡೆಯಲಿದೆ. ಸಕಾಲಿಕವಾಗಿ ರಥಬೀದಿ ಗೆಳೆಯರು ಹಾಗೂ ಶಿವರಾಮ ಕಾರಂತ ಟ್ರಸ್ಟ್ ಸಹಕಾರದಲ್ಲಿ ವಿವಿಧ ಕಾರ್ಯಕ್ರಮ, ವಿಚಾರ ಸಂಕಿರಣವನ್ನೂ ಆಯೋಜಿಸಲಿದ್ದೇವೆ ಎಂದು ವಿವರಿಸಿದರು.
ಈ ಮೊದಲಿದ್ದ ಯಕ್ಷ ರಂಗಾಯಣ ಕಾರ್ಕಳ ಎಂಬ ಹೆಸರಿನಿಂದಾಗಿ ಸಾಹಿತಿ, ವಿದ್ವಾಂಸ ಹಾಗೂ ಜನಸಾಮಾನ್ಯರಲ್ಲಿ ಇದು ಯಕ್ಷಗಾನಕ್ಕೆ ಸಂಬಂಧಿಸಿದ ರಂಗಾಯಣ ಎಂಬ ಕಲ್ಪನೆಯಿತ್ತು. ಯಕ್ಷಗಾನಕ್ಕಾಗಿಯೇ ಅಕಾಡೆಮಿ, ಇನ್ನಿತರ ಅನೇಕ ಸಂಘಟನೆ ಇರುವಾಗ ಇದರ ಕೆಲಸವೇನು ಎಂಬ ಗೊಂದಲವಿತ್ತು. ಅದನ್ನು ನಿವಾರಿಸಲೆಂದು 1993ರಲ್ಲಿ ಮಾಡಿದ್ದ ರಂಗಾಯಣದ ಬೈಲಾದಲ್ಲಿ 'ಕರಾವಳಿ ರಂಗಾಯಣ' ಎಂಬ ಉಲ್ಲೇಖವೂ ಇತ್ತು. ಅದನ್ನು ಪರಿಗಣಿಸಿ ಸರ್ಕಾರವು 2026ರ ಏ.4ರಂದು "ಕರಾವಳಿ ರಂಗಾಯಣ ಕಾರ್ಕಳ' ಎಂದು ಹೆಸರು ಬದಲಿಸಿ ಆದೇಶಿಸಿತು. ಕಳೆದ ಜೂ.4ರಂದು ಸಂಸ್ಥೆಯ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿಸಿದರು. ರಾಜ್ಯದ ಇನ್ನಿತರ ರಂಗಾಯಣಕ್ಕೆ ನೀಡುತ್ತಿರುವ ಅನುದಾನ ಹೆಚ್ಚಿದ್ದು, ತಮಗೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿಯೂ ಅವರು ತಿಳಿಸಿದರು.
ಕಾರಂತರು ಕರಾವಳಿಗೆ ಸೀಮಿತರಲ್ಲ
ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸತ ಕೋಟ ಶಿವರಾಮ ಕಾರಂತರು ಕೇವಲ ಕರಾವಳಿಗೆ ಮಾತ್ರ ಸೀಮಿತರಲ್ಲ. ಅವರನ್ನು ರಾಜ್ಯವ್ಯಾಪಿ ಪರಿಚಯಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಹೀಗಾಗಿ ಅಖಿಲ ಕರ್ನಾಟಕ ಮಟ್ಟದಲ್ಲಿ ನಮ್ಮ ಕಾರ್ಯಕ್ರಮ ವಿಸ್ತರಿಸಿದ್ದೇವೆ. ಅರಿವಿನ ಬೆಳಕು ವಿಚಾರ ಸಂಕಿರಣ, ಕಾರಂತರ ಬದುಕು-ಬರಹ ಉಪನ್ಯಾಸ, ಶಾಲಾ ಮಕ್ಕಳಿಗೆ ಕಾರಂತರನ್ನು ಪರಿಚಯಿಸಲು ರಂಗೋಲಿಯಲ್ಲಿ ಕಾರಂತರು, ವಿವಿಧ ಸ್ಪರ್ಧೆ, ಕಾರಂತರು ಹೊಂದಿದ್ದ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ತಿಳಿಸುತ್ತಿದ್ದೇವೆ. ನಾಟಕದ ಮೂಲಕ ಕಾರಂತರ ವ್ಯಕ್ತಿತ್ವ, ಸಾಹಿತ್ಯ, ಕಾದಂಬರಿಗಳನ್ನು ಜನಮಾನಸಕ್ಕೆ ತಲುಪಿಸುತ್ತಿದ್ದೇವೆ ಎಂದರು.
ಬರವಣಿಗೆ ಸಂಗ್ರಹಾಲಯ
ಕಾರಂತರ ಹೆಸರಿನಲ್ಲಿ ರಾಜ್ಯ ಪ್ರಸ್ತಿಯೂ ಸೇರಿದಂತೆ ಕಳೆದ ಒಂದೂವರೆ ವರ್ಷದಲ್ಲಿ 54 ಕಾರ್ಯಕ್ರಮ ಮಾಡಿದ್ದೇವೆ. 2026ರ ಅಕ್ಟೊಬರ್ 10ರಂದು ಕಾರಂತರ 125ನೇ ಜನ್ಮದಿನಾಚರಣೆಯನ್ನು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ. ಉಡುಪಿಯನ್ನೇ ಕೇಂದ್ರವಾಗಿಟ್ಟುಕೊಂಡು ಕಾರಂತರ ನೆನಪು ಚಿರಸ್ಥಾಯಿಯಾಗಿಸಲು ಅವರ ಎಲ್ಲ ಕೃತಿಗಳ ಸಂಗ್ರಹ ಮತ್ತು ಅವರ ಕುರಿತಾದ ಬರವಣಿಗೆಯ ಸಂಗ್ರಹಾಲಯ ನಿರ್ಮಿಸಲು ಯೋಜಿಸಲಾಗಿದೆ ಎಂದು ಗಣನಾಥ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಕಾರಂತ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಅಸ್ಮಿತೆಗೆ ಸರ್ಕಾರದಿಂದ ದ್ರೋಹ
* ಶಾಸಕ ವಿ.ಸುನೀಲಕುಮಾರ್ ಆಕ್ರೋಶ
ಸುನೀಲಕುಮಾರ್. ಕಾರ್ಕಳ 'ಯಕ್ಷ ರಂಗಾಯಣ' ಕೇಂದ್ರದ ಹೆಸರನ್ನು ರಾಜ್ಯ ಸರ್ಕಾರ ಏಕಾಏಕಿ ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ ಎಂದು ಕಾರ್ಕಳ ಶಾಸಕ ವಿ.ಸುನೀಲಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಿಸುವ ಈ ದಿಢೀರ್ ಮತ್ತು ದುರುದ್ದೇಶಪೂರಿತ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆ, ರಂಗಭೂಮಿ ಹಾಗೂ ಹಗಲಿರುಳು ಈ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಘೋರ ಅಪಮಾನ. ಇದು ಯಕ್ಷಗಾನ ಕಲೆಯ ಕತ್ತು ಹಿಸುಕುವ ರಾಜ್ಯ ಸರ್ಕಾರದ ವ್ಯವಸ್ಥಿತ ಸಂಚು. ಹೆಸರು ಬದಲಿಸುವ ನಿರ್ಧಾರಕ್ಕೆ ಮುನ್ನ ಕರಾವಳಿ ಭಾಗದ ಜನಪ್ರತಿನಿಧಿಗಳ ಜತೆ ಚರ್ಚಿಸದೆ, ಯಾರ ಗಮನಕ್ಕೂ ತಾರದೆ, ಸ್ಥಳೀಯರ ವಿಶ್ವಾಸ ಗಳಿಸದೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.